ಜಿಲ್ಲೆ

ಕುವೈಟ್‌ನಿಂದ ಬಂತು ಮತ್ತೊಂದು ಆಕ್ಸಿಜನ್‌ ಹಡಗು

ಮಂಗಳೂರು: ನವಮಂಗಳೂರು ಬಂದರಿಗೆ ಆಕ್ಸಿಜನ್‌ ಟ್ಯಾಂಕರ್‌ ಹೇರಿಕೊಂಡು ಐದನೇ ಬಾರಿಗೆ ನೌಕಾಪಡೆಯ ಹಡಗು ಆಗಮಿಸಿದೆ.
ಸಮುದ್ರ ಸೇತು-2 ರ ಭಾಗವಾಗಿ ಮಂಗಳವಾರ ಬೆಳಗ್ಗೆ ಎನ್‌ಎಂಪಿಟಿಗೆ ಐಎನ್‌ಎಸ್‌ ಶಾರ್ದೂಲ್‌ ನೌಕೆಯು 11 ಲಿಕ್ವಿಡ್‌ಆಕ್ಸಿಜನ್‌ ಟ್ಯಾಂಕರ್‌, 2 ಆಕ್ಸಿಜನ್‌ ಸೆಮಿ ಟ್ರೈಲರ್‌ಗಳು, 1200 ಆಕ್ಸಿಜನ್‌ ಸಿಲಿಂಡರ್‌ಗಳನ್ನು ತನ್ನೊಂದಿಗೆ ಕರೆತಂದಿದೆ. ಕುವೈಟ್‌ನ ಇಂಡಿಯನ್‌ ಕಮ್ಯುನಿಟಿ ಸಪೋರ್ಟ್‌ ಗ್ರೂಪ್‌ನವರು ಈ ಆಕ್ಸಿಜನ್‌ನ್ನು ಭಾರತೀಯ ರೆಡ್‌ಕ್ರಾಸ್‌ ಸೊಸೈಟಿಗೆ ಕೊಡುಗೆಯಾಗಿ ನೀಡಿದ್ದಾರೆ.
ಭಾರತೀಯ ರೆಡ್‌ಕ್ರಾಸ್‌ ದ.ಕ ಜಿಲ್ಲಾ ಚೇರ್ಮನ್‌ ಶಾಂತಾರಾಮ ಶೆಟ್ಟಿ, ಕಾರ್ಯದರ್ಶಿ ಪ್ರಭಾಕರ ಶರ್ಮ, ರೆಡ್‌ಕ್ರಾಸ್‌ನ ಕರ್ನಾಟಕ ರಾಜ್ಯ ನಿರ್ವಹಣಾ ಸಮಿತಿಯ ಸದಸ್ಯ ಯತೀಶ್‌ ಬೈಕಂಪಾಡಿ ಅವರು ಈ ಆಕ್ಸಿಜನ್‌ ಸರಕನ್ನು ಮಂಗಳವಾರ ಎನ್‌ಎಂಪಿಟಿಯಲ್ಲಿ ಸ್ವೀಕರಿಸಿದರು.
ಈ ವೇಳೆ ಎಡಿಜಿಪಿ ಪ್ರತಾಪ್‌ ರೆಡ್ಡಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌, ಡಿಸಿಪಿ ಹರಿರಾಂ ಶಂಕರ್‌, ಎಸಿಪಿ ಮಹೇಶ್‌ ಕುಮಾರ್‌, ತಟರಕ್ಷಣಾ ಪಡೆ ಕಮಾಂಡೆಂಟ್‌ ವೆಂಕಟೇಶ್‌ ಹಾಜರಿದ್ದರು.

ಇದು ಮಂಗಳೂರಿಗೆ ವಿದೇಶದಿಂದ ಆಗಮಿಸಿರುವ ಐದನೇ ಆಕ್ಸಿಜನ್‌ ನೌಕೆಯಾಗಿದೆ. ಮೇ.5ರಂದು ಮೊದಲ ನೌಕೆ ಐಎನ್‌ಎಸ್‌ ತಲ್ವಾರ್‌ 40 ಟನ್‌ ಆಕ್ಸಿಜನ್‌ ಸಹಿತ ಆಗಮಿಸಿತ್ತು.