ಉಡುಪಿಯ ತೆಂಕನಿಡಿಯೂರಿನ ಕಾಲೇಜಿನಲ್ಲಿ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ಮಮತಾದೇವಿ ಜಿ.ಎಸ್​. ಉದ್ಘಾಟಿಸಿದರು. ನೀಲಾವರ ಸುರೇಂದ್ರ ಅಡಿಗ, ಡಾ. ಸುರೇಶ್​ ರೈ.ಕೆ., ಪೂರ್ಣಿಮಾ , ಡಾ.ಶ್ರೀಕಾಂತ್​ ಸಿದ್ದಾಪುರ, ಶಶಿಧರ್​ ಇದ್ದರು. 
ಜಿಲ್ಲೆ

ಶಿವಶರಣರ ವಚನಗಳಿಂದ ಸಮಾಜ ಸುಧಾರಣೆ

ಮಮತಾದೇವಿ ಜಿ.ಎಸ್​. ಅಭಿಪ್ರಾಯ | ಹಡಪದ ಅಪ್ಪಣ್ಣ ಜಯಂತಿ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಶಿವಶರಣರು ರಚಿಸಿರುವ ವಚನಗಳು ಸಾಮಾಜಿಕವಾಗಿ ಮಾತ್ರವಲ್ಲದೆ ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರ ಸುಧಾರಣೆಗೂ ಪೂರಕವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್​. ಅಭಿಪ್ರಾಯಪಟ್ಟರು.

ಉಡುಪಿ ತಾಲೂಕಿನ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಸನ್ಮಾರ್ಗದಲ್ಲಿ ನಡೆಯಬೇಕು

ವಿಶ್ವಗುರು ಬಸವಣ್ಣನ ವಿಶ್ವಾಸದ ಹಾಗೂ ನಿಷ್ಠಾವಂತ ಆಪ್ತ ಕಾರ್ಯದರ್ಶಿಯಾಗಿದ್ದ ಅಪ್ಪಣ್ಣ, ಬಸವಣ್ಣನ ಯಶಸ್ಸಿನ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ವಚನಕಾರರ ಬಗ್ಗೆ ತಿಳಿಯುವ ಹಾಗೂ ಅವರು ರಚಿಸಿದ ವಚನಗಳ ಮೌಲ್ಯ ಅಳವಡಿಸಿಕೊಂಡು
ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.

ಸಾಂಸ್ಕೃತಿಕ ಚಿಂತಕ ಡಾ.ಶ್ರೀಕಾಂತ್​ ಸಿದ್ದಾಪುರ ಉಪನ್ಯಾಸ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಸಾಪ ಜಿಲ್ಲಾ ಕಾರ್ಯದರ್ಶಿ ನರಸಿಂಹ ಮೂರ್ತಿ, ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್​ ರೈ.ಕೆ., ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇಲಾಖೆಯ ಶಶಿಧರ್​ ಕಾರ್ಯಕ್ರಮ ನಿರೂಪಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ವಂದಿಸಿದರು.

ಹನ್ನೆರಡನೇ ಶತಮಾನದ ಮಹತ್ವಪೂರ್ಣ ಕಾಲಘಟ್ಟದಲ್ಲಿ ಕಾಯಕ ನಿಷ್ಠೆಯ ಬಸವಾದಿ ಶರಣರು ಮೇಲು-ಕೀಳು, ಜಾತಿ ಪದ್ಧತಿ, ಕಂದಾಚಾರಗಳ ವಿರುದ್ಧ ಧ್ವನಿ ಎತ್ತಿದ್ದರು. ಸಮ-ಸಮಾಜ ನಿರ್ಮಾಣಕ್ಕೆ ನಾಂದಿ ಹಾಕಿದರು. ಡಾ.ಶ್ರೀಕಾಂತ್​ ಸಿದ್ದಾಪುರ. ಸಾಂಸ್ಕೃತಿಕ ಚಿಂತಕ