ಬೆಂಗಳೂರು: ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಹುಟ್ಟುಹಬ್ಬದ ಗೌರವಾರ್ಥ ಆ.29 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ದಿನವನ್ನು ವಿನೂತನ ರೀತಿಯಲ್ಲಿ ಆಚರಿಸಲಾಗುವುದು ಎಂದು ಕ್ರೀಡಾ ಸಚಿವ ಬಿ.ನಾಗೇಂದ್ರ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಏಳೆಂಟು ಸಾವಿರ ಮಕ್ಕಳನ್ನು ಆಹ್ವಾನಿಸಿ 30 ಕ್ಕೂ ಹೆಚ್ಚು ಕ್ರೀಡೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.
ಈಗಾಗಲೇ ಆ. 21 ರಿಂದ ಎಲ್ಲ ಶಾಲೆಗಳಲ್ಲೂ ಕ್ರೀಡಾಕೂಟಗಳು ನಡೆಯುತ್ತಿವೆ. ಆ.29 ರಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೂ ಕ್ರೀಡಾಕೂಟಗಳು ನಡೆಯಲಿವೆ. ಅದರಲ್ಲಿ ದೇಸಿ, ಸಾಂಪ್ರದಾಯಿಕ ಕ್ರೀಡೆಗಳು ಮಾತ್ರವಲ್ಲದೆ, ಮನರಂಜನೆ ಕ್ರೀಡೆಗಳು ಸೇರಿದಂತೆ 30ಕ್ಕೂ ಹೆಚ್ಚು ಕ್ರೀಡೆಗಳಿವೆ ಎಂದು ತಿಳಿಸಿದರು.
ಅಥ್ಲೆಟಿಕ್ಸ್, ಕಬ್ಬಡಿ, ವಾಲಿಬಾಲ್, ಆರ್ಚರಿ, ಮಲ್ಲಕಂಬ, ಬಾಸ್ಕೆಟ್ ಬಾಲ್, ಬ್ಯಾಕಿಂಗ್, ಹಾಕಿ, ಆರ್ಚರಿ, ಜೂಡೋ, ಟೇಕ್ವಾಂಡೋ, ಮಣ್ಣಿನ ಕುಸ್ತಿ, ಹಗ್ಗ ಜಗ್ಗಾಟ, ಜುಮಾರಿಂಗ್, ಜಿಪ್ ಲೈನ್, ಸ್ಕೇಟಿಂಗ್, ಸ್ಕೇಟ್ ಬೋರ್ಡಿಂಗ್, ಚೆಸ್, ಪುಟ್ಬಾಲ್ ಕ್ರೀಡೆಗಳು ಇರಲಿವೆ. ಈ ಕ್ರೀಡೆಗಳಿಗೆ ಮುಕ್ತ ಪ್ರವೇಶವಿದೆ, ಯಾರು ಬೇಕಾದರೂ ಬಂದು ಭಾಗವಹಿಸಬಹುದು. ಇದೇ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸನ್ಮಾನಿಸಲಾಗುವುದು ಎಂದು ನಾಗೇಂದ್ರ ತಿಳಿಸಿದರು.