ಜಿಲ್ಲೆ

ಭಾಷಾಂತರದಿಂದ ಹೊಸತನ ಸೃಷ್ಟಿ: ಸಾಹಿತಿ ಪ್ರಧಾನ್ ಗುರುದತ್ತ

ಮೈಸೂರು: ಭಾಷಾಂತರದಿಂದ ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮನ್ನಣೆ ದೊರೆತಿದೆ ಎಂದು ಸಾಹಿತಿ ಪ್ರಧಾನ್ ಗುರುದತ್ತ ಹೇಳಿದರು.


ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ಭಾನುವಾರ ಸಂಜೆ ನಡೆದ ‘ಭಾಷಾಂತರ: ಸಾಂಸ್ಕೃತಿಕ ಸಂಬಂಧಗಳ ಜಾಲತಾಣದ ಪಾಸ್‌ವರ್ಡ್’ ಗೋಷ್ಠಿಯಲ್ಲಿ ಮಾತನಾಡಿದರು.


ಕನ್ನಡದ ಮೇರು ಕೃತಿಗಳು ಇಂಗ್ಲಿಷ್, ರಷಿಯನ್, ಫ್ರೆಂಚ್ ಸೇರಿದಂತೆ ವಿವಿಧ ವಿದೇಶದ ಭಾಷೆಗಳಿಗೆ ಅನುವಾದವಾಗಿವೆ. ಅಮೆರಿಕದಲ್ಲಿರುವ 4 ಕನ್ನಡ ಸಂಘಗಳು ಕನ್ನಡ ಭಾಷಾಂತರ ಕೆಲಸದಲ್ಲಿ ತೊಡಗಿವೆ. ಇದು ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮನ್ನಣೆ ದೊರೆತಿರುವುದಕ್ಕೆ ಸಾಕ್ಷಿ. ಜಗತ್ತಿನಲ್ಲಿರುವ ಶ್ರೇಷ್ಠ ಕೃತಿಗಳು ಸಹ ಕನ್ನಡಕ್ಕೆ ಅನುವಾದಗೊಂಡಿವೆ. ವಿಶ್ವವಿದ್ಯಾಲಯಗಳು, ಅಕಾಡೆಮಿಗಳು ಸೇರಿದಂತೆ ಇನ್ನಿತರ ಸಂಸ್ಥೆಗಳು, ಅನುವಾದಕರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.


ಅನುವಾದದ ಮೂಲಕ ಬಂದಿರುವ ಬೇರೆ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಲೋಕ ಮತ್ತಷ್ಟು ಸಮೃದ್ಧವಾಗಿದೆ. ಅನ್ಯ ಭಾಷೆಯ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ಪರಿಚಯಿಸಲಾಗಿದೆ. ಭಾಷಾಂತರದಿಂದ ಹೊಸತನ ಸೃಷ್ಟಿಯಾಗಲಿದ್ದು, ಈ ಕ್ರಿಯೆ ಮನಸ್ಸುಗಳ ನಡುವೆ ಅಂತರ ರಹಿತ ಸಂಚಲನವಾಗಿದೆ. ಇದಕ್ಕೆ ಸಾಗರ, ಮರುಭೂಮಿ, ದೇಶಗಳ ಗಡಿ ಅಡ್ಡಿ ಬರುವುದಿಲ್ಲ ಎಂದರು.


ಭಾಷಾಂತರಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಆದಿಕವಿ ಪಂಪನಿಂದ ಹಿಡಿದು ಕುವೆಂಪುವರೆಗೂ ಅನೇಕ ಬರಹಗಾರರು ಅನುವಾದವನ್ನು ಮಾಡಿದ್ದು, ಸಂಸ್ಕೃತ, ಪ್ರಾಕೃತ, ತಮಿಳು, ತೆಲುಗು ಇನ್ನಿತರ ಭಾಷೆಗಳಿಂದ ಕನ್ನಡಕ್ಕೆ ತರ್ಜುಮೆ ಮಾಡಲಾಗಿದೆ. ಇದಕ್ಕೆ ಸುದೀರ್ಘ ಪರಂಪರೆ ಇದೆ. ಆಧುನಿಕ ಕಾಲದಲ್ಲೂ ಇದು ಮುಂದುವರಿದುಕೊಂಡು ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಮತ್ತೊಬ್ಬ ಸಾಹಿತಿ ವಿಕ್ರಂ ಚದುರಂಗ ಮಾತನಾಡಿ, ಸೃಜನಶೀಲ ಬರವಣಿಗೆ ಮತ್ತು ಅನುವಾದ ಕ್ರಿಯೆ ಬೇರೆ ಬೇರೆಯಲ್ಲ. ಸೃಜನಶೀಲ ಬರವಣಿಗೆ ಸೃಷ್ಟಿಕರಣವಾದರೆ, ಭಾಷಾಂತರ ಸಾಹಿತ್ಯದ ಮರು ಸೃಷ್ಟಿಕರಣವಷ್ಟೇ. ಯೋಚನಾಭಾವ, ಕಲ್ಪನೆ, ಲಯ, ಭಾಷಾ ಸೊಗಡು ಸಾಹಿತ್ಯ ಸಂಬಂಧವನ್ನು ಬೆಳೆಸುತ್ತದೆ ಎಂದರು. ಸಿವಿಲ್ ಇಂಜಿನಿಯರ್, ಇತಿಹಾಸ ಪ್ರೇಮಿ ಧರ್ಮೇಂದ್ರ ಕುಮಾರ್ ಇದ್ದರು.

ಅಲೆಮಾರಿಗಳ ಸಂಕಥನ..!

ಅಜ್ಞಾತ ಅಲೆಮಾರಿ ಕಲಾವಿದರು ತಮ್ಮ ಅನುಭವವನ್ನು ಹಂಚಿಕೊಂಡರು. ಅಲೆಮಾರಿ ಸಮುದಾಯದ ಶಿಳ್ಳೆಕ್ಯಾತರ ಮಂಜುನಾಥ್, ಹೆಳವರಸೊಲ್ಲಿನ ಮಲ್ಲಯ್ಯ, ಮ್ಯಾಜಿಕ್ ಕಲಾವಿದ ಸಯ್ಯದ್ ಮೌಲಾ, ದೊಂಬರ ನರಸಿಂಹ ಮತ್ತು ರಾಣಿ ಅವರು ತಮ್ಮ ಸಾಂಪ್ರದಾಯಿಕ ಕಲೆ, ಪರಂಪರೆ ಕುರಿತು ಮಾಹಿತಿ ಹಂಚಿಕೊಂಡರು.

ಮೈಸೂರು ಆಕಾಶವಾಣಿ ಕಾರ್ಯಕ್ರಮಗಳ ಸಹಾಯಕ ನಿರ್ದೇಶಕ ಅಬ್ದುಲ್ ರಶೀದ್ ಇದ್ದರು. ಇದಕ್ಕೂ ಮುನ್ನ, ಲೇಖಕ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ‘ಭಾಷಾ ಪಾಂಡಿತ್ಯ ಸೃಜನಶೀಲತೆಯನ್ನು ಮಸಕು ಮಾಡುವುದೇ?’ ಕುರಿತು ಮಾತನಾಡಿದರು.