ಕಲಬುರಗಿ: ನವರಾತ್ರಿ ದಸರಾ ಹಬ್ಬದ ನಿಮಿತ್ತ ಇನ್ನರ್ ವ್ಹಿಲ್ ಕ್ಲಬ್ ಆಫ್ ಗುಲ್ಬರ್ಗ ಸನ್‌ಸಿಟಿಯಿಂದ ನಗರದ ಯಶ ಕೊಠಾರಿ ಭವನದಲ್ಲಿ ಭಾನುವಾರ (ಅ.6) ಸಂಜೆ 6ಕ್ಕೆ ರಸ ರಂಗರಂಗ ಸಾಮೂಹಿಕ ದಾಂಡಿಯಾ ನೃತ್ಯ ಆಯೋಜಿಸಲಾಗಿದೆ ಎಂದು ಕ್ಲಬ್ ಮಾಜಿ ಅಧ್ಯಕ್ಷೆ ಸ್ವಪ್ನಾ ದೇಶಪಾಂಡೆ ತಿಳಿಸಿದರು.
ಕ್ಲಬ್‌ನಿಂದ ಸತತ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದ್ದು, ವಿಶೇಷವಾಗಿ ಸ್ತ್ರೀ ಸಬಲೀಕರಣಕ್ಕಾಗಿ ಕೆಲಸ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ದಾಂಡಿಯಾ ನೃತ್ಯ ಆಯೋಜಿಸಿ, ಹೆಚ್ಚು ಹೆಚ್ಚು ಜನರನ್ನು ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ದಾಂಡಿಯಾ ನೃತ್ಯಕ್ಕೆ ೨೦೦ ರೂ. ಪ್ರವೇಶ ಶುಲ್ಕವಿದ್ದು, ಮಹಿಳೆಯರಿಗೆ ಮಾತ್ರ ಅವಕಾಶವಿದೆ. ವಿಶೇಷ ಅತಿಥಿಯಾಗಿ ಲಕ್ಷ್ಮೀ ಡಿ. ಪಾಟೀಲ್ ಮತ್ತು ದತ್ತಾತ್ರೇಯ ಪಾಟೀಲ್ ಭಾಗವಹಿಸಲಿದ್ದಾರೆ. ಮಹಿಳೆಯರು ಗುಜರಾತಿ ಸಾಂಪ್ರದಾಯಿಕ ಧಿರಿಸಿನಲ್ಲಿ ಭಾಗವಹಿಸಬೇಕು, ದಾಂಡಿಯಾದಲ್ಲಿ ನೃತ್ಯ ಮಾಡಿದವರಿಗೆ ೧೦ ವಿಭಾಗದಲ್ಲಿ ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಸಮುದಾಯ ಜಾಗೃತಿಗೆ ವಿನಿಯೋಗ: ನೃತ್ಯದಲ್ಲಿ ಉಳಿದ ಮತ್ತು ಧಾನಿಗಳಿಂದ ಬಂದ ಹಣವನ್ನು ಬಡ ಸಮುದಾಯಕ್ಕೆ ಬಳಸುವ ಉದ್ದೇಶ ಹೊಂದಲಾಗಿದೆ. ಆರೋಗ್ಯ ಜಾಗೃತಿ, ಮನೋವೈಕ್ಯಲ್ಯಕ್ಕೆ ಒಳಗಾದ ಮಕ್ಕಳ ಆರೋಗ್ಯ ರಕ್ಷಣೆ, ಕ್ಯಾನ್ಸರ್ ಜಾಗೃತಿ, ಕ್ಯಾನ್ಸರ್ ಲಸಿಕೆಗೆ ಧನಸಹಾಯ, ಸೈಬರ್ ಕ್ರೈಂ ಜಾಗೃತಿ, ಸಾಕ್ಷರ ಅಭಿಯಾನ, ಕಾನೂನು ಜ್ಞಾನ, ಸ್ತ್ರೀ ಸಬಲೀಕರಣಕ್ಕೆ ಹೊಲಿಗೆ ತರಬೇತಿ, ವೃದ್ಧಾಶ್ರಮಗಳಿಗೆ ನೆರವು, ಶಾಲೆಗಳ ದತ್ತು, ಪರಿಸರ ರಕ್ಷಣೆಗೆ ಬಳಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು ನವರಾತ್ರಿ ವೈಭವ ಹೆಚ್ಚಿಸುವ ಜತೆಗೆ ಸಾಮಾಜಿಕ ಕಾರ್ಯಗಳಿಗೆ ಕೈ ಜೋಡಿಸಬೇಕು ಎಂದು ಕೋರಿದರು.
ಕ್ಲಬ್ ಅಧ್ಯಕ್ಷೆ ಸುನಿತಾ ಬೋಹ್ರಾ, ಕಾರ್ಯದರ್ಶಿ ಸಂತೋಷಿ ನಾಗಜಾ, ಯೋಗಿತಾ ಗಿಲ್ಡಾ, ಮನೀಶಾ ಜೈಜನ್ ಇತರರಿದ್ದರು.