ತೆಲಸಂಗ: ವಚನದ ಸಾರ ಆದರ್ಶ ಬದುಕಿಗೆ ದಾರಿ ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು. ಗ್ರಾಮದ ಮಹಾತ್ಮ ಗಾಂಧಿ ಪ್ರೌಢಶಾಲೆಯ 1990-91ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ, ಸ್ನೇಹ ಸಮ್ಮಿಲನ, ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಗುರುವಿಗಿಂತ ಶ್ರೇಷ್ಠ ಗುರು ಒಬ್ಬನಿದ್ದಾನೆ. ಅದುವೇ ಅರಿವೇ ಗುರು. ಪ್ರತಿಯೊಬ್ಬರೂ ಅಂಗಭಾವದಿಂದ ಲಿಂಗಭಾವವಾಗಿ ಬಸವಣ್ಣನಾಗಬೇಕು. ನಮ್ಮೆಲ್ಲರ ಅಂತರಂಗ ಶುದ್ಧವಾಗದ ಹೊರತು ಭಾರತ ಶುದ್ಧವಾಗಲು ಸಾಧ್ಯವಿಲ್ಲ.ಜಗತ್ತಿನಲ್ಲಿ ಬಸವಣ್ಣನವರಿಗಿಂತ ವ್ಯಕ್ತಿತ್ವ ವಿಕಸಕ ಮತ್ತೊಬ್ಬರಿಲ್ಲ ಎಂದರು.
ಶಿರಹಟ್ಟಿಯ ಜಗದ್ಗುರು ಕೀರ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಗುರುವಿಗೆ ವಂದನೆ ಸಲ್ಲಿಸುವವರೂ ಇವತ್ತಿಗೂ ನೋಡಸಿಗುತ್ತಿರುವುದು ನಮಗೆ ಸಂತೋಷ ತಂದಿದೆ. ವಿದ್ಯಾರ್ಥಿಗಳ ಭದ್ರ ಭವಿಷ್ಯಕ್ಕೆ ಬುನಾದಿ ಹಾಕುವಲ್ಲಿ ಶಿಕ್ಷಕರ ಪಾತ್ರ ಮುಖ್ಯ ಎಂದರು ಹಿರೇಮಠದ ವೀರೇಶ್ವರ ದೇವರು, ವಕೀಲ ಬಿ.ಎಲ್.ಪಾಟೀಲ, ಶಿಕ್ಷಕ ಬಿ.ಎನ್.ಅವಟಿ ಮಾತನಾಡಿದರು. ನಿವೃತ್ತ ಶಿಕ್ಷಕರು, ಹಳೇ ವಿದ್ಯಾರ್ಥಿಗಳು ಇದ್ದರು.