ಕೂಡ್ಲಿಗಿ: ಪಟ್ಟಣದ ಗ್ರಾಮ ದೇವತೆ ಶ್ರೀ ಊರಮ್ಮ ದೇವಿ ಕಾರ್ತಿಕೋತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.
ಕಾರ್ತಿಕ ಮಾಸದ ಅಂಗವಾಗಿ ಊರಮ್ಮ ದೇವಿಗೆ ಬ್ರಾಹ್ಮಿ ಮಹೂರ್ತದಲ್ಲಿ ವಿವಿಧ ಪುಷ್ಪಗಳು, ಪೂಜಾ ಪರಿಕರಗಳಿಂದ ಅಲಂಕಾರ ಮಾಡಿ, ಕುಂಕುಮಾರ್ಚನೆ ಮಾಡಲಾಯಿತು. ಮಹಿಳೆಯರು ದೇವಿಗೆ ಸೀರೆ, ಉಡಿ ಅಕ್ಕಿ, ಹೂ-ಹಣ್ಣುಗಳನ್ನು ಸಮರ್ಪಿಸಿದರು.ಹರಕೆ ಹೊತ್ತ ಭಕ್ತರು ನೈವೇದ್ಯ ಅರ್ಪಿಸಿದರು.
ಸಂಜೆ 5.30 ಕ್ಕೆ ಗರ್ಭಗುಡಿಯಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿಯೊಂದಿಗೆ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ದೇವಸ್ಥಾನದ ಮುಂಭಾಗದಲ್ಲಿ ದೀಪ ಬೆಳಗಿಸಿ, ನಂತರ ಪಟಾಕಿ ಹಚ್ಚಿ ಸಂಭ್ರಮಿಸಿದರು. ಸಂಜೆ 6ರಿಂದ ರಾತ್ರಿ 9 ರವರೆಗೂ ಸರತಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು. ಬಳಿಕ ಭಜನೆ ಕಾರ್ಯಕ್ರಮ ನಡೆಯಿತು.
ಏಳು ಮಕ್ಕಳ ತಾಯಮ್ಮ, ಸೊಲ್ಲಮ್ಮ ದೇವಿ ಕಾರ್ತೀಕ: ಪಟ್ಟಣದ 10ನೇ ವಾರ್ಡ್‌ನ ಶ್ರಿ ಏಳು ಮಕ್ಕಳ ತಾಯಮ್ಮ, ಎಂಟನೇ ವಾರ್ಡ್‌ನ ಶ್ರೀ ಸೊಲ್ಲಮ್ಮ ದೇವಿಗೆ ಭಕ್ತರು ಕಾರ್ತಿಕ ದೀಪ ಬೆಳಗಿದರು. ಕುಟುಂಬದೊಂದಿಗೆ ದೇವಿ ದರ್ಶನ ಪಡೆದ ಭಕ್ತರು, ಹಣತೆ ಹಚ್ಚಿ, ಹೂ, ಹಣ್ಣು, ಕಾಯಿ ಸಮರ್ಪಿಸಿದರು. ಪ್ರಮುಖರಾದ ಕೆ.ಎಚ್.ವೀರನಗೌಡ, ಹಿ.ಮ.ಚಿದಾನಂದ ಸ್ವಾಮಿ, ಕೆ.ಸೋಮಶೇಖರ ಪಾಟೀಲ್, ಕೆ.ಬಿ.ಮಂಜುನಾಥ, ಸಣ್ಣ ಕೊತ್ಲಪ್ಪ, ಬಾಣದ ಶಂಕರ, ಕೆ.ಬಿ.ನಾಗರಾಜ, ಗುಜ್ಜಲ ಗಣೇಶ, ತುಪ್ಪಳ್ಳಿ ಮಂಜುನಾಥ, ದುರುಗಪ್ಪ, ತಳವಾರ ಸುರೇಶ ಇದ್ದರು.