ವಿಜಯಪುರ: ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಒಳಮೀಸಲಾತಿ ಜಾರಿಗೊಳಿಸಿದ್ದು, ಇದರಿಂದ ಬಂಜಾರಾ, ಕೊರಚ, ಕೊರಮ, ಭೋವಿ ಸಮುದಾಯಗಳಿಗೆ ಬಹಳಷ್ಟು ಅನ್ಯಾಯವಾಗಿದೆ. ಹೀಗಾಗಿ ಸೆ.10 ರಂದು ಬೆಂಗಳೂರಿನ ಸ್ವಾತಂತ್ರೃ ಉದ್ಯಾನದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಆಯಾ ಸಮುದಾಯದ ಮುಖಂಡರು ತಿಳಿಸಿದರು.
ಅವೈಜ್ಞಾನಿಕವಾಗಿರುವ ಒಳಮೀಸಲಾತಿ ರದ್ದುಗೊಳಿಸಿ, ಇಲ್ಲದೇ ಹೋದರೆ ಎಲ್ಲರಿಗೂ ಸಮಾನವಾಗಿ ಮೀಸಲಾತಿ ನೀಡಬೇಕು. ಅಲ್ಲಿಯವರೆಗೂ ಹೋರಾಟ ನಿರಂತರವಾಗಿರಲಿದೆ ಎಂದು ಶನಿವಾರ ಜಂಟಿಯಾಗಿ ಅವರು ಸುದ್ದಿಗೋಷ್ಠಿ ನಡೆಸಿದರು.
ಮುಖಂಡ ಮಹೇಂದ್ರ ನಾಯಕ ಮಾತನಾಡಿ, ಅವೈಜ್ಞಾನಿಕ ಸಮೀಕ್ಷೆಯಿಂದಾಗಿ ಬಂಜಾರಾ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗಿದೆ. ತಾಂಡಾದ ಜನರು ದೀಪಾವಳಿಗೆ ಮಾತ್ರ ಊರಿಗೆ ಬರುತ್ತಾರೆ, ಬಾಕಿ ಸಮಯದಲ್ಲಿ ಬಡತನದಿಂದಾಗಿ ಗುಳೆ ಹೋಗುತ್ತಾರೆ, ಅವರು ಗುಳೆ ಹೋದ ಸಮಯದಲ್ಲಿ ಸಮೀಕ್ಷೆ ನಡೆಸುವುದು ಅವೈಜ್ಞಾನಿಕ ಅಲ್ಲದೇ ಮತ್ತೇನು? ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಈ ವಿಷಯವಾಗಿ ಮುಖ್ಯಮಂತ್ರಿಗಳನ್ನು ಸಮಾಜದ ಮುಖಂಡರೊಂದಿಗೆ ಭೇಟಿ ಮಾಡಲು ಸಮಯ ಕೋರಿದ್ದರು. ಆದರೆ ಅವರಿಗೆ ಸಮಯವೇ ಸಿಗಲಿಲ್ಲ, ಹೀಗಾದರೆ ಯಾರಿಗೆ ನಮ್ಮ ನೋವು ಹೇಳಬೇಕು ಎಂದರು.
ಮಾಜಿ ಶಾಸಕ ಮನೋಹರ ಐನಾಪೂರ ಮಾತನಾಡಿ, ಸ್ಪಶ್ಯ, ಅಸ್ಪಶ್ಯ ಎಂಬ ಬೇರ್ಪಡಿಸುವಿಕೆಯೇ ಸಂವಿಧಾನದಲ್ಲಿ ಇಲ್ಲ. ಆದರೆ ಆಳುವ ಸರ್ಕಾರಗಳು ಬೇಧ ಹುಟ್ಟಿಸಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೋಷಪೂರಿತ ದತ್ತಾಂಶವನ್ನು ಪರಿಗಣಿಸಿ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಿರುವ ಕ್ರಮದಿಂದ ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ಎಂದರು.
ರಾಜ್ಯ ಸರ್ಕಾರಗಳು ಮಾಡಬಹುದಾದ ಮೀಸಲಾತಿ ವರ್ಗೀಕರಣ ಪ್ರಕ್ರೀಯೆಯು ನ್ಯಾಯಾಲಯದ ಪರಾಮರ್ಶೆಗೆ ಒಳಪಡಲಿದೆ ಎಂಬುದನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ನೀಡಿರುವ ಈ ಎಲ್ಲಾ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿರುವುದು ರಾಜ್ಯ ಸರ್ಕಾರ ಕರ್ತವ್ಯ. ಆದರೆ ಸರ್ಕಾರ ಈ ನಿಯಮವನ್ನು ಪಾಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಂಡಾಗಳಲ್ಲಿ ವಾಸಿಸುವ ಲಂಬಾಣಿ ಸಮುದಾಯದವರು. ನೆಲೆ ಇಲ್ಲದ ಸ್ಥಳಗಳಲ್ಲಿ ಕಲ್ಲು ಒಡೆದು ಜೀವಿಸುವ ಭೋವಿ ಸಮುದಾಯದವರು, ಇರಲು ಸೂರುಗಳೇ ಇಲ್ಲದ ಕೊರಚ, ಕೊರಮ ಊರೂರು ತಿರುಗುವ ಅಲೆಮಾರಿ ಸಮುದಾಯದವರು. ಈ ಎಲ್ಲರಿಗೆ ಅವೈಜ್ಞಾನಿಕ ಒಳ ಮೀಸಲಾತಿಯ ಪ್ರಮಾಣದಿಂದ ದೊಡ್ಡ ಅನ್ಯಾಯವಾಗಿದೆ. ಅದೇ ರೀತಿ ಎಡಗೈ ಹಾಗೂ ಬಲಗೈ ಸಮುದಾಯಗಳಿಗೂ ಗೊಂದಲವನ್ನು ಸೃಷ್ಟಿ ಮಾಡಲಾಗಿದೆ ಎಂದರು.
ಕೆಸರಟ್ಟಿಯ ಸೋಮಲಿಂಗ ಸ್ವಾಮೀಜಿ ಮಾತನಾಡಿ, ಈ ಹಿಂದೆ ಇದೇ ರೀತಿಯ ದುಸ್ಸಾಹಸಕ್ಕೆ ಬಿಜೆಪಿ ಕೈ ಹಾಕಿತ್ತು. ಆಗ ಬಿಜೆಪಿ ಹಠಾವೋ - ತಾಂಡಾ ಬಚಾವೋ ನಡೆಸಿ ಬಿಜೆಪಿಗೆ ತಕ್ಕ ಪಾಠ ಕಲಿಸಲಾಗಿತ್ತು, ಈಗ ಕಾಂಗ್ರೆಸ್ ಸಹ ಇದೇ ರೀತಿ ವರ್ತನೆ ಮಾಡುತ್ತಿದೆ. ಈ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯದೇ ಹೋದರೆ ಆ ಪಕ್ಷಕ್ಕೂ ತಕ್ಕ ಪಾಠ ಕಲಿಸಲಾಗುವುದು. ನಾವು ಯಾರ ಹಕ್ಕನ್ನೂ ಕಸಿದುಕೊಳ್ಳುತ್ತಿಲ್ಲ, ಬದಲಾಗಿ ಎಲ್ಲರಿಗೂ ಸರಿಸಮಾನವಾದ ನ್ಯಾಯ ಕೊಡಿ ಎಂದಷ್ಟೇ ಕೇಳುತ್ತಿದ್ದೇವೆ ಎಂದರು.
ಮಾಜಿ ಶಾಸಕ ದೇವಾನಂದ ಚವಾಣ್ ಮಾತನಾಡಿ, ಒಳಮೀಸಲಾತಿ ಜಾರಿಗೊಳಿಸುವ ಮುನ್ನ ಪುನರ್ ಪರೀಶೀಲನೆ ಮಾಡುವುದು, ರಾಜ್ಯವ್ಯಾಪಿ ಪ್ರವಾಸ ಮಾಡಿ ಎಲ್ಲ ತಾಂಡ, ತಾಲೂಕು, ಜಿಲ್ಲೆಗಳ ಸಮುದಾಯಗಳ ಮಾಹಿತಿಯನ್ನು ಪಡೆಯುವುದರೊಂದಿಗೆ ಎಲ್ಲ ಪರಿಶಿಷ್ಟ ಜಾತಿಗಳ ಜನಪ್ರತಿನಿಧಿಗಳ, ತಜ್ಞರನ್ನು ಆಹ್ವಾನಿಸಿ ಅಹವಾಲು ಸ್ವೀಕರಿಸುವುದು, ಮೀಸಲಾತಿ ವರ್ಗೀಕರಣ ಕುರಿತ ಸುಪ್ರೀಂ ಕೋರ್ಟಿನ ಆದೇಶದಂತೆ ಸೂಕ್ತ ಮಾನದಂಡಗಳನ್ನು ರೂಪಿಸಬೇಕು. ಜಾತಿವಾರು ಸ್ಥಿತಿಗತಿಗಳ ಸಮೀಕ್ಷೆ ಹಾಗೂ ಗಣತಿ ನಡೆಸಬೇಕು, ಈ ಎಲ್ಲ ಸಮುದಾಯಗಳಿಗೆ ಶೇ.7 ರಷ್ಟು ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಸಂಜೀವ ಮಹಾರಾಜರು, ಮುಖಂಡರಾದ ಡಿ.ಎಲ್. ಚವಾಣ್, ಅನುಸೂಯಾ ಜಾಧವ, ಸುರೇಶ ಬಿಜಾಪೂರ, ರಾಜು ಜಾಧವ, ಪ್ರಕಾಶ ಚವಾಣ್, ಮಲ್ಲಿಕಾರ್ಜುನ ನಾಯಕ, ಸಂತೋಷ ನಾಯಕ, ಆರ್.ಬಿ. ನಾಯಕ, ರಾಮು ಅಂಕಲಗಿ, ಅಬ್ದುಲ್ ಕುಂಚಿಕೊರವರ, ಈರಪ್ಪ ಕೊರಮ, ಕೆರಚಪ್ಪ ಕುಂಚಿಕೊರವರ, ಗಿರಿಮಲ್ಲಪ್ಪ ಭಜಂತ್ರಿ, ಶಿವು ಭಜಂತ್ರಿ, ಮಲ್ಲು ಭಜಂತ್ರಿ, ಪ್ರವೀಣ ಚವಾಣ್, ಸುರೇಶ ಪವಾರ, ರವಿ ರಾಠೋಡ, ಡಾ.ಅರವಿಂದ ಲಮಾಣಿ, ರಾಜಕುಮಾರ ರಾಠೋಡ, ಸಂತೋಷ ನಾಯಕ ಮತ್ತಿತರರಿದ್ದರು.