ಶೃಂಗೇರಿ: ಜಿಪಿಎಸ್ ಗುತ್ತಿಗೆದಾರರಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಲಾರಿ ಮಾಲೀಕರ ಸಂಘದ ಸದಸ್ಯರು ಮಂಗಳವಾರ ಕನ್ನಡ ಭವನದದ ಎದುರು ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ಸರ್ಕಾರದ ಒಂದು ರಾಜ್ಯ ಒಂದು ಜಿಪಿಎಸ್ ಯೋಜನೆಯಡಿ ಕಟ್ಟಡ ಸಾಮಾಗ್ರಿ ಸರಬರಾಜು ವಾಹನಗಳು ಹಾಗೂ ದಿನನಿತ್ಯ ಸಂಚರಿಸುವ ಸರಕು ಸಾಗಾಣಿಕೆ ವಾಹನಗಳಿಗೆ ಒಂದು ವರ್ಷದ ಕೆಳಗೆ ಗತ್ತಿಗೆದಾರರಿಗೆ ಹಣ ಪಾವತಿಸಿ ಜಿಪಿಎಸ್ ಅಳವಡಿಸಲಾಗಿದೆ. ಆದರೆ ಈ ಬಗ್ಗೆ ನಮಗೆ ಯಾವುದೇ ಬಿಲ್ ನೀಡಿಲ್ಲ. ಅರ್ಥಿಕ ವರ್ಷದ ಕೊನೆಯಲ್ಲಿ 500 ರೂ. ನೀಡಿ ರಿಚಾರ್ಜ್ ಮಾಡಲಾಗಿದೆ. ಈಗ ಮತ್ತೆ ವಾರ್ಷಿಕ ನಿರ್ವಹಣಾ ವೆಚ್ಚ 5.500 ರೂ. ನೀಡಬೇಕು ಎಂದು ನಮ್ಮ ವಾಹನದ ಜಿಪಿಎಸ್ ಸಂಪರ್ಕ ರದ್ದು ಮಾಡಿದ್ದಾರೆ ಎಂದು ಆರೋಪಿಸಿದರು.
ಸಂಘದ ಸದಸ್ಯ ಸಚೀಂದ್ರ ಮಾತನಾಡಿ, ಜಿಪಿಎಸ್ ಸಂಪರ್ಕ ರದ್ದಾದ ಕಾರಣ ಯಾವುದೇ ವಾಹನಗಳಿಗೆ ಪರ್ಮಿಟ್ ಸಿಗುವುದಿಲ್ಲ. ಇದರಿಂದ ನಮಗೆ ತೊಂದರೆಯಾಗಿದೆ. ಮಳೆಗಾಲದಲ್ಲಿ ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳಲ್ಲಿ ಘನ ವಾಹನಗಳು ಸಂಚರಿಸದಂತೆ ಜಿಲ್ಲಾಧಿಕಾರಿ ಆದೇಶ ನೀಡಿರುತ್ತಾರೆ. ಜಿಪಿಎಸ್ ಗುತ್ತಿಗೆದಾರರು ಯಾವ ಮಾನದಂಡದಡಿ ಹೆಚ್ಚುವರಿ ಶುಲ್ಕ ಕೇಳುತ್ತಿದ್ದಾರೆ ಎಂಬುದರ ಕುರಿತು ಡಿಸಿ ಸಮ್ಮುಖದಲ್ಲಿ ಸಭೆ ನಡೆಸಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಸಂಘದ ಸದಸ್ಯರಾದ ಕೀರ್ತಿಕುಮಾರ್, ನವೀನ್ ಹೊಳೆಕೊಪ್ಪ, ವೆಂಕಟೇಶ್, ಕುಮಾರ್ ಆನೆಗುಂದ, ವಸಂತ್,ಶೃಂಗೇಶ್ ಹಾಜರಿದ್ದರು.