ರಾಮನಗರ: ಬಿಡದಿಯ ಬೈರಮಂಗಲ ಕ್ರಾಸ್ ಬಳಿ ಕಸದಿಂದ ವಿದ್ಯುತ್ ಉತ್ಪಾದಿಸುವ (ವೇಸ್ಟ್ ಟು ಎನರ್ಜಿ–ಡಬ್ಲ್ಯುಟಿಇ) ಘಟಕದಲ್ಲಿ ನಡೆದಿದ್ದ ಅವಘಡದಲ್ಲಿ ಗಾಯಗೊಂಡಿದ್ದ 5 ಕಾರ್ಮಿಕರ ಪೈಕಿ ಓರ್ವ ಕಾರ್ಮಿಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಉಮೇಶ್ ಕುಮಾರ್ ಸಿಂಗ್ ( 33) ಮೃತ ಕಾರ್ಮಿಕನಾಗಿದ್ದಾನೆ. ಕಳೆದ ಶನಿವಾರ ಘಟಕದ ಬೂದಿಯ ಪೈಪ್ ಬಿಚ್ಚುವ ಸಮಯದಲ್ಲಿ ಬಿಸಿ ಬೂದಿ ಬಿದ್ದು
ಐದು ಮಂದಿ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದವು. ಗಾಯಾಳುಗಳಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತಿ. ಈ ಪೈಕಿ ಇಬ್ಬರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಮಂಗಳವಾರ ಚಿಕಿತ್ಸೆ ಫಲಿಸದೆ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ.
ಒಣ ತ್ಯಾಜ್ಯ ಬರ್ನ್ ಆದ ನಂತರ ಬೂದಿ ಹೊರ ಹೋಗುವ ಬಾಯ್ಲರ್ ಪೈಪ್ ಕಟ್ಟಿಕೊಂಡಿದ್ದ ಪರಿಣಾಮವಾಗಿ ಕಾರ್ಮಿಕರು ಯಾವುದೇ ಮುಂಜಾಗ್ರತಾ ಕ್ರಮ ವಹಿಸದೆ ಓಪನ್ ಮಾಡಿದ ಕಾರಣದಿಂದಾಗಿ ಬಿಸಿ ಬೂದಿ ಬಿದ್ದು ಕಾರ್ಮಿಕರಿಗೆ ಗಾಯಗಳಾಗಿದ್ದವು.