ಭಿಕೋ ಎನ್ನುತ್ತಿದೆ ಬಯಲು ರಂಗಮಂಟಪ. 
ಜಿಲ್ಲೆ

ಪಾಳು ಕೊಂಪೆಯಾಗಿದೆ ‘ಸೌಹಾರ್ದ ನಗರ’: ಮೂಲ ಸೌಕರ್ಯಗಳಿಲ್ಲ : ಬಯಲು ರಂಗಮಂಟಪ, ಪಾರ್ಕ್ ಅನಾಥ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಗುರುಪುರ

ಸುಮಾರು 23 ವರ್ಷಗಳ ಹಿಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಜಾಗ ಬಿಟ್ಟು ಕೊಟ್ಟವರ ಪುನರ್ವಸತಿಗೆ ನಿರ್ಮಾಣವಾಗಿದ್ದ ‘ಸೌಹಾರ್ದ ನಗರ’ ಇಂದು ಮೂಲಸೌಕರ್ಯಗಳಿಲ್ಲದೆ ಅಕ್ಷರಶಃ ಕೊಂಪೆಯಂತಾಗಿದೆ. ಇಲ್ಲಿನ ಜನರ ಬವಣೆ ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ.

ಸೌಹಾರ್ದ ನಗರಕ್ಕೆ ಬಜ್ಪೆಯಿಂದ ಡಾಂಬರು ರಸ್ತೆ ನಿರ್ಮಾಣಗೊಂಡಿತ್ತು. ಅದೀಗ ಎದ್ದುಹೋಗಿದ್ದು, ಡಾಂಬರು ಕಾಣದೆ ಅದೆಷ್ಟೋ ವರ್ಷಗಳಾಗಿವೆ. 20 ಎಕರೆಗೂ ಹೆಚ್ಚು ವಿಸ್ತಾರವಾಗಿರುವ ಸೌಹಾರ್ದ ನಗರದಲ್ಲಿ ಒಂದು ಹಿಂದು ರುದ್ರಭೂಮಿ, ಬಯಲು ರಂಗ ಮಂಟಪ, ಶಾಲೆ ಇದೆ. ಉದ್ಯಾನವೆಂದು ನಿರ್ಮಿಸಲ್ಪಟ್ಟ ಪಾರ್ಕ್‌ನಲ್ಲಿ ಒಂದೆರಡು ಒಣಗಿದ ಮರಗಳಿವೆ.

ಕಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸೌಹಾರ್ದ ನಗರದ ಮಣ್ಣಿನ ರಸ್ತೆಯ ಪಾರ್ಶ್ವಗಳಲ್ಲಿ ಆಳೆತ್ತರಕ್ಕೆ ಹುಲ್ಲು ಬೆಳೆದಿದೆ. ಪೊದೆಗಳ ಸಾಂದ್ರತೆಯಲ್ಲಿ ವಿಷಜಂತುಗಳು ಹಾಗೂ ಚಿರತೆಯಂತಹ ನರಭಕ್ಷಕ ಪ್ರಾಣಿಗಳು ಅಡಗಿಕೊಂಡಿದ್ದರೆ ಯಾರ ಗಮನಕ್ಕೂ ಬರಲಾರದು. ಚರಂಡಿಯೇ ಕಾಣದಷ್ಟು ಹೂಳು ತುಂಬಿದೆ. ಸೌಹಾರ್ದ ನಗರದಲ್ಲಿ ಸುಮಾರು 100 ಮನೆಗಳಿವೆ. ಒಂದು ಪ್ರಯಾಣಿಕರ ತಂಗುದಾಣವಿದ್ದರೂ ಇಲ್ಲಿಗೆ ಬಸ್ ಮಾತ್ರ ಬರುವುದಿಲ್ಲ. ಹಿಂದು ರುದ್ರಭೂಮಿ ಕೊರತೆಗಳ ಆಗರವಾಗಿದೆ.

ಪಾಳು ಬಿದ್ದಿರುವ ಪಾರ್ಕ್.
ಶಾಲಾ ಕಟ್ಟಡ(ಅಂಗನವಾಡಿ).
ಇನ್ನೂ ಡಾಂಬರು ಕಾಣದ ರಸ್ತೆ.

ಪಂಚಾಯಿತಿ ನಿರಾಸಕ್ತಿ

ಖಾಲಿ ಬಿದ್ದಿದ್ದ ಶಾಲಾ ಕಟ್ಟಡದಲ್ಲಿ ಈಗ ಅಂಗನವಾಡಿ ಕಾರ್ಯಾಚರಿಸುತ್ತಿದೆ. ಬಯಲು ರಂಗಮಂಟಪ ಮತ್ತು ಪಾರ್ಕ್ ಅನಾಥವಾಗಿದೆ. ಸೌಹಾರ್ದ ನಗರ ಪುನರುಜ್ಜೀವನಕ್ಕೆ ಪಂಚಾಯಿತಿ ಆಡಳಿತ ಆಸಕ್ತಿ ವಹಿಸಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೌಹಾರ್ದ ನಗರಕ್ಕೆ ಮೂಲಸೌಕರ್ಯಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಈವರೆಗೆ ಯಾವುದೇ ಸ್ಪಂದನೆ ಇಲ್ಲ. ಇನ್ನು ಹೋರಾಟ ಅನಿವಾರ್ಯವಾಗಿದೆ. ಸಿರಾಜ್ ಬಜ್ಪೆ, ಸಂಚಾಲಕರು, ಬಜ್ಪೆ ನಾಗರಿಕ ಹಿತರಕ್ಷಣಾ ವೇದಿಕೆ https://www.vijayavani.net/kruthi-bidugade https://www.vijayavani.net/soil-mafia