ಜಿಲ್ಲೆ

ಸಂತೆಯಲ್ಲಿ ಸುಧಾ ಸರಳತೆ

Bagalkot

ಬಾಗಲಕೋಟೆ: ಸರಳತೆಯ ಸಾಕಾರ ಮೂರ್ತಿ ಎಂದೇ ಗುರುತಿಸಿಕೊಂಡಿರುವ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಭಾನುವಾರ ಜಮಖಂಡಿಯ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ತಾವೇ ಸ್ವತಃ ತಾಜಾ ತರಕಾರಿ, ಹೂವು, ಹಣ್ಣು ಖರೀದಿ ಮಾಡಿದ್ದು ಗಮನ ಸೆಳೆಯಿತು.

ಶನಿವಾರ ಸಂಜೆ ಜಮಖಂಡಿ ನಗರಕ್ಕೆ ಆಗಮಿಸಿದ್ದ ಸುಧಾಮೂರ್ತಿ ಅವರ ಸಹೋದರ ಸಂಬಂಧಿ ನಾರಾಯಣ ಕುಲಕರ್ಣಿ ಅವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ಭಾನುವಾರ ಬೆಳಗ್ಗೆ ತರಕಾರಿ ಮಾರುಕಟ್ಟೆಗೆ ತೆರಳಿ ಸೌತೆಕಾಯಿ, ಗಜ್ಜರಿ, ಕೊತ್ತಂಬರಿ, ಬದನೆಕಾಯಿ, ಕಡ್ಲಿ ಪಲ್ಲೆ, ಬಾಳೆಹಣ್ಣು, ದಾಳಿಂಬೆ ಸೇರಿ ಹಣ್ಣು, ಹೂವು, ತರಕಾರಿ ಖರೀದಿ ಮಾಡಿದರು.

ತರಕಾರಿ ವ್ಯಾಪಾರಸ್ಥರು ಹೇಳಿದಷ್ಟು ದುಡ್ಡು ಕೊಟ್ಟರು. ಜತೆಗೆ ಬೆಳೆ ಹೇಗೆ ಬಂದಿದೆ? ಮಳೆ ಹೇಗಾಗಿದೆ? ಖರ್ಚು ಎಷ್ಟು ಬಂತು? ಬೆಲೆ ಏನಿದೆ? ಹೀಗೆ ವಿವಿಧ ರೀತಿಯ ಪ್ರಶ್ನೆ ಕೇಳಿ ಅವರಿಂದ ಉತ್ತರ ಪಡೆದರು. ಹಾಗೆಯೇ ತಾಜಾ ತಾಜಾ ತರಕಾರಿ, ಹಣ್ಣು, ಹೂವು ಕಂಡು ‘ಎಷ್ಟು ಚಲೋ ಐತೆಲ್ಲ? ತಾಜಾ ಇದೆ’ ಅಂತ ಖುಷಿ ಪಟ್ಟರು.

ಆದರೆ ಇವರು ಯಾರು? ಎಂದು ತಿಳಿಯದ ತರಕಾರಿ ವ್ಯಾಪಾರಸ್ಥರು ಅವರು ಹೋದ ನಂತರ ‘ಅಮ್ಮ’ ಯಾರೆಂದು ತಿಳಿದು ಅಯ್ಯೋ ಇವರೇನಾ? ಮೊದಲೇ ತಿಳಿದಿದ್ದರೇ ಒಂದು ಫೋಟೋ ತೆಗೆಸಿಕೊಳ್ಳುತ್ತಿದ್ದೆವು ಎಂದು ಮರುಗಿದರು.

ನಂತರ ಅವರ ಪತಿ ನಾರಾಯಣಮೂರ್ತಿಯವರ ಮನೆ ದೇವರಾದ ಜಮಖಂಡಿ ತಾಲೂಕಿನ ಶೂರ್ಪಾಲಿ ದೇವಸ್ಥಾನಕ್ಕೆ ತೆರಳಿ ಅಲ್ಲಿನ ಪ್ರಸಿದ್ಧ ಹಾಗೂ ಪ್ರಾಚೀನ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಣೆ ಮಾಡಿದರು. ಬಳಿಕ ತಮ್ಮ ತವರು ಮನೆ ಕುಲದೇವರಾದ ಕಲ್ಹಳ್ಳಿ ವೆಂಕಟರಮಣ ದೇವಸ್ಥಾನಕ್ಕೂ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಜಮಖಂಡಿಗೆ ಆಗಮಿಸಿ ಅಲ್ಲಿಂದ ಬಾಗಲಕೋಟೆ ಮಾರ್ಗವಾಗಿ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ತೆರಳಿ, ಅಲ್ಲಿಂದ ಹುಬ್ಬಳ್ಳಿಗೆ ತೆರಳಿದರು.

ಪ್ರವಾಹಕ್ಕೆ ಸಿಲುಕಿದ್ದ ದೇವಸ್ಥಾನ
ಕಳೆದ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕೃಷ್ಣಾ ನದಿ ಪ್ರವಾಹದಲ್ಲಿ ಶೂರ್ಪಾಲಿ ದೇವಸ್ಥಾನ ಜಲಾವೃತ್ತವಾಗಿತ್ತಲ್ಲದೆ ನೀರು ಬಸಿದು ದೇವಸ್ಥಾನಕ್ಕೆ ನುಗ್ಗಿತ್ತು. ಆ ವೇಳೆ ಸುಧಾಮೂರ್ತಿ ಅವರು ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಸಲಕರಣೆ ಕಳುಹಿಸಿ ದೇವಸ್ಥಾನ ಸ್ವಚ್ಛಗೊಳಿಸಿದ್ದರು. ಪ್ರತಿ ವರ್ಷ ಸುಧಾಮೂರ್ತಿ ಅಧಿಕ ಮಾಸದಲ್ಲಿ ದೇವಸ್ಥಾನಕ್ಕೆ ಬರುತ್ತಿದ್ದರು. ಈ ವರ್ಷ ಪ್ರವಾಹದಿಂದಾಗಿ ಈಗ ಬಂದಿದ್ದಾರೆ ಎಂದು ಅವರ ಸೋದರಳಿಯ ಜಮಖಂಡಿಯ ನಾರಾಯಣ ಕುಲಕರ್ಣಿ ಅವರು ‘ವಿಜಯವಾಣಿ’ಗೆ ತಿಳಿಸಿದರು.

ಸೆಲ್ಫಿಗೆ ಮುಗಿಬಿದ್ದ ಜನತೆ
ತರಕಾರಿ ಮಾರುಕಟ್ಟೆಯಲ್ಲಿ ರೈತರಿಗೆ ಮತ್ತು ಮಹಿಳೆಯರಿಗೆ ಸಾಮಾನ್ಯ ಮಹಿಳೆಯರಂತೆ ಬಂದಿದ್ದ ಸುಧಾಮೂರ್ತಿ ಅವರ ಪರಿಚಯ ಆಗಲಿಲ್ಲ. ತರಕಾರಿ ಖರೀದಿ ಮಾಡಿ ಹೋಗುವಾಗ ಅಲ್ಲಿಗೆ ತರಕಾರಿ ಖರೀದಿಗೆ ಬಂದಿದ್ದ ನೌಕರರು, ವ್ಯಾಪಾರಸ್ಥರು ಇವರನ್ನು ನೋಡಿ ಅಚ್ಚರಿಗೊಂಡರು. ಅವರ ಬಳಿಗೆ ತೆರಳಿ ಸೆಲ್ಫಿಗೆ ಮುಗಿಬಿದ್ದರು. ನಗುನಗುತ್ತಲೆ ಜನರೊಂದಿಗೆ ಫೋಟೋ ತೆಗೆಸಿಕೊಂಡು ಸರಳತೆ ಮೆರೆದರು.

ಸುಧಾಮೂರ್ತಿ ಅವರು ಪ್ರತಿವರ್ಷ ಶೂರ್ಪಾಲಿ ಮತ್ತು ಕಲ್ಹಳ್ಳಿ ದೇವಸ್ಥಾನಗಳಿಗೆ ಬಂದು ಹೋಗುತ್ತಾರೆ. ಆದರೆ, ಈ ಸಲ ಅವರೆ ಬೆಳಗ್ಗೆ ಎದ್ದು ನೇರವಾಗಿ ತರಕಾರಿ ಮಾರುಕಟ್ಟೆಗೆ ಹೋಗಿ ಕಾಯಿಪಲ್ಲೆ, ಹಣ್ಣು, ಹೂವು ಖರೀದಿ ಮಾಡಿದರು. ರೈತರಿಗೆ, ಮಹಿಳೆಯರಿಗೆ ಆರಾಮ ಇದ್ದೀರಾ ಎಂದು ಯೋಗಕ್ಷೇಮ ವಿಚಾರಿಸಿದರು.
- ನಾರಾಯಣ ಕುಲಕರ್ಣಿ ಸುಧಾಮೂರ್ತಿ ಅವರ ಸೋದರ ಅಳಿಯ, ಜಮಖಂಡಿ

EndFragment