ಜಿಲ್ಲೆ

ಇನ್ಫೋಸಿಸ್ 400 ಟ್ರೈನಿಗಳ ವಜಾ : ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ದೂರು

ಮೈಸೂರು: ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಲ್ಲಿ ತರಬೇತಿ ಪಡೆಯುತ್ತಿದ್ದ 400 ಟ್ರೈನಿಗಳನ್ನು ಕಂಪನಿ ವಜಾಗೊಳಿಸಿದ್ದು, ಕಂಪನಿಯ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ವಿಚಾರ ಇದೀಗ ಕೇಂದ್ರ ಕಾರ್ಮಿಕ ಸಚಿವಾಲಯದವರೆಗೂ ತಲುಪಿದೆ.

ಮೌಲ್ಯಮಾಪನ ಪರೀಕ್ಷೆಗಳಲ್ಲಿ ಮೂರು ಬಾರಿ ಅನುತ್ತೀರ್ಣರಾದ ಟ್ರೈನಿಗಳನ್ನು ವಜಾಗೊಳಿಸಲಾಗಿದೆ ಎಂದು ಕಂಪನಿ ಸಮರ್ಥಿ ಸಿಕೊಂಡಿದೆ. 400 ಟ್ರೈನಿಗಳನ್ನು 2024ರ ಅಕ್ಟೋಬರ್‌ನಲ್ಲಿ ನೇಮಕ ಮಾಡಿಕೊಂಡು ಮೈಸೂರು ಕ್ಯಾಂಪಸ್‌ನಲ್ಲಿ ತರಬೇತಿ ನೀಡಲಾಗುತಿತ್ತು. ತರಬೇತಿ ಅವಧಿಯಲ್ಲಿ ಈ ಅಭ್ಯರ್ಥಿಗಳು ಕಂಪನಿ ನೀಡಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಹಿನ್ನೆಲೆಯಲ್ಲಿ ಅವರನ್ನು ತರಬೇತಿಯಿಂದ ಕೈ ಬಿಡಲಾಗಿದೆ ಎಂಬ ಕಂಪನಿಯ ನಿರ್ಧಾರಕ್ಕೆ ಟ್ರೈನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿಲಿಬಸ್ ಅನ್ನು ದಿಢೀರಾಗಿ ಮಧ್ಯದಲ್ಲಿ ಬದಲಾವಣೆ ಮಾಡಿದ ಹಿನ್ನೆಲೆಯಲ್ಲಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಸಾಧ್ಯವಿಲ್ಲ. ಕಂಪನಿ ಸೃಷ್ಟಿಸಿದ ಗೊಂದಲದಿಂದಲೇ ಟ್ರೈನಿಗಳು ಅನುತ್ತೀರ್ಣಗೊಂಡಿದ್ದಾರೆ. ಅಮಾನವೀಯವಾಗಿ ಇಷ್ಟೊಂದು ಟ್ರೈನಿಗಳನ್ನು ಹೊರ ಹಾಕಿರುವುದು ಸರಿಯಲ್ಲ ಎಂದು ಟ್ರೈನಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಟ್ರೈನಿಗಳ ಬೆಂಬಲಕ್ಕೆ ನಿಂತಿರುವ ಐಟಿ ಉದ್ಯೋಗಿಗಳ ಒಕ್ಕೂಟ ಇನ್ಪೋಸಿಸ್ ಕಂಪನಿಯ ನಿರ್ಧಾರಕ್ಕೆ ಅಸಮಾಧಾನ ಹೊರ ಹಾಕಿದೆ. ಕಂಪನಿಯ ನಿರ್ಧಾರದ ವಿರುದ್ಧ ಐಟಿ ಉದ್ಯೋಗಿಗಳ ಒಕ್ಕೂಟವು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ದೂರು ನೀಡಿದ್ದು, ಅಗತ್ಯ ಕ್ರಮ ವಹಿಸುವಂತೆ ಆಗ್ರಹಿಸಿದೆ.

ಟ್ರೈನಿಗಳ ಮೇಲೆ ನಡೆದಿರುವ ಶೋಷಣೆ ಸರಿಯಲ್ಲ. ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಟ್ರೈನಿಗಳಿಗೆ ನ್ಯಾಯ ಕೊಡಿಸಬೇಕು. ಭಾರತೀಯ ಐಟಿ ಕಾರ್ಮಿಕರ ಹಕ್ಕುಗಳು ಮತ್ತು ಘನತೆಯನ್ನು ಎತ್ತಿಹಿಡಿಯಲು ಸರ್ಕಾರವು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟದ ಅಧ್ಯಕ್ಷ ಹರ್ಪ್ರೀತ್ ಸಿಂಗ್ ಸಲುಜಾ ಆಗ್ರಹಿಸಿದ್ದಾರೆ.