ಜಿಲ್ಲೆ

ಕಾಲಮಿತಿಯೊಳಗೆ ನೀಡದ ಮಾಹಿತಿ : ಮುಡಾ ತಹಶೀಲ್ದಾರ್‌ಗೆ ದಂಡ

ಮೈಸೂರು: ಮಾಹಿತಿ ಹಕ್ಕು ಕಾಲಮಿತಿಯೊಳಗೆ ಮಾಹಿತಿ ನೀಡದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ತಹಶೀಲ್ದಾರ್ ರವಿಪ್ರಸಾದ್‌ಗೆ ರಾಜ್ಯ ಮಾಹಿತಿ ಆಯೋಗ 10 ಸಾವಿ ರೂ. ದಂಡ ವಿಧಿಸಿದೆ.

ನಗರದ ದಟ್ಟಗಳ್ಳಿಯ (ರಾಮಕೃಷ್ಣನಗರ) ಐ ಬ್ಲಾಕ್ ಬಡಾವಣೆಯಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗವನ್ನು ವೆಂಕಟರಮಣ ನಾರಾಯಣ ನಾಯಕ ಎಂಬವರಿಗೆ ನೀಡಿರುವ ವಿಚಾರದ ಕುರಿತು ಜಯನಗರದ ಸಾ.ತಿ. ಸದಾನಂದ ಗೌಡ ಮುಡಾದಿಂದ ಮಾಹಿತಿ ಹಕ್ಕು ಕಾಯ್ದೆಯಡಿ 18-10-2022 ರಂದು ಮಾಹಿತಿ ಬಯಸಿದ್ದರು. ಆದರೆ, ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿರುವ ತಹಸೀಲ್ದಾರ್ ರವಿಪ್ರಸಾದ್ ಸಕಾಲದಲ್ಲಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸಾ.ತಿ. ಸದಾನಂದ ಗೌಡ 23-12-2022 ರಂದು ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು. ಪ್ರಥಮ ಮೇಲ್ಮನವಿ ಪ್ರಾಧಿಕಾರವು ಸಹ ಮಾಹಿತಿ ಕೊಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಕಲಂ 19 (3)ರ ಪ್ರಕಾರ ಸಾ.ತಿ. ಸದಾನಂದ ಗೌಡ 3-3-2023 ರಂದು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಆಯೋಗವು 16-01-2024ರಂದು ಸದರಿ ಪ್ರಕರಣದ ವಿಚಾರಣೆ ನಡೆಸಿದ ಸಂದರ್ಭ ಸಾ.ತಿ. ಸದಾನಂದ ಗೌಡ ಅವರಿಗೆ ಮಾಹಿತಿ ಒದಗಿಸಿರುವ ಕುರಿತು ತಹಶೀಲ್ದಾರ್ ರವಿಪ್ರಸಾದ್ ಯಾವುದೇ ದಾಖಲೆಗಳನ್ನು ಆಯೋಗಕ್ಕೆ ನೀಡಲಿಲ್ಲ. ಅಲ್ಲದೆ, ವಿಚಾರಣೆಗೆ ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಆಯೋಗವು ರವಿಪ್ರಸಾದ್‌ಗೆ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸದರಿ ದಂಡದ ಮೊತ್ತವನ್ನು ರವಿಪ್ರಸಾದ್ ಅವರ ವೇತನದಿಂದ ಕಡಿತಗೊಳಿಸುವಂತೆ ರಾಜ್ಯ ಮಾಹಿತಿ ಆಯುಕ್ತ ಕೆ.ಪಿ. ಮಂಜುನಾಥ ಅವರು ತೀರ್ಪಿನಲ್ಲಿ ಆದೇಶಿಸಿದ್ದಾರೆ.