ಉಡುಪಿ: ಡೆಂಘೆ ನಿರ್ಲಕ್ಷಿಸಿದರೆ ಜೀವಕ್ಕೆ ಅಪಾಯ ಅತ್ಯಂತ ದೊಡ್ಡ ರೋಗವೇನಲ್ಲ. ಆದರೆ ನಿರ್ಲಕ್ಷಿಸಿದರೆ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಮುಂಜಾಗ್ರತಾ ಕ್ರಮವಾಗಿ ಮನೆಯ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಈ ಸೊಳ್ಳೆಗಳ ಮೇಲೆ ವಿಶೇಷ ನಿಗಾ ವಹಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಕೆ. ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್, ರೋಟರಿ ಕ್ಲಬ್ ಉದ್ಯಾವರ ಮತ್ತು ಉದ್ಯಾವರ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಶುಕ್ರವಾರ ನಡೆದ ಡೆಂಘೆ ಜ್ವರದ ಬಗ್ಗೆ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಳಗ್ಗಿನ ಅವಧಿಯಲ್ಲಿ ಕಚ್ಚುವಂತಹ ಈ ಸೊಳ್ಳೆಗಳ ಮೂಲಕ ಡೆಂಘೆ ಜ್ವರ ಹರಡುತ್ತಿದೆ. ಮನೆ ಪರಿಸರದಲ್ಲಿ ಚಿಪ್ಪು, ಚಹಾಲೋಟ ಸಹಿತ ವಿವಿಧ ಸ್ಥಳಗಳಲ್ಲಿ ನೀರು ನಿಂತರೆ ಇಂಥ ಸಮಸ್ಯೆಗಳು ಉದ್ಭವಿಸುತ್ತದೆ. ಮನೆ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ಬಯಸುವುದು ಅತ್ಯಗತ್ಯ. ಕಹಿಬೇವಿನ ಎಣ್ಣೆ ಹಚ್ಚುವುದರಿಂದ ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸಬಹುದು ಎಂದರು.
ಇದೇ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವು ಮನೆಗಳಿಗೆ ಭೇಟಿ ನೀಡಿ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ಮತ್ತು ಜಾಗೃತಿ ನೀಡಲಾಯಿತು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಈಶ್ವರ್ ಗಡದ, ಜಿಲ್ಲಾ ರೋಗವಾಹಕ ಆಶ್ರುತ ರೋಗಗಳ ನಿರ್ವಹಣಾಧಿಕಾರಿ ಡಾ. ಪ್ರಶಾಂತ್ ಭಟ್, ತಹಶೀಲ್ದಾರ್ ಗುರುರಾಜ್, ಉದ್ಯಾವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಪಿಡಿಒ ರಮೇಶ್, ಪಶುವೈದ್ಯಾಧಿಕಾರಿ ಡಾ. ಸಂದೀಪ್ ಶೆಟ್ಟಿ, ಉಡುಪಿ ಜಿಲ್ಲಾ ಕೀಟಶಾಸ್ತ್ರಜ್ಞ್ಞೆ ಮುಕ್ತ ಆಚಾರ್, ಉಡುಪಿ ತಾಲೂಕು ಆರೋಗ್ಯ ಅಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಮೂಡಬೆಟ್ಟು ಆರೋಗ್ಯಧಿಕಾರಿ ಡಾ. ಶೈನಿ, ಲಯನ್ಸ್ ಇಂಟರ್ನ್ಯಾಶನಲ್ ಫೌಂಡೇಶನ್ ಜಿಲ್ಲಾ ಸಂಯೋಜನಾಧಿಕಾರಿ ಲಯನ್ ಹರಿಪ್ರಸಾದ್ ರೈ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ಅಧ್ಯಕ್ಷ ಲಯನ್ ರೊನಾಲ್ಡ್ ರೆಬೆಲ್ಲೊ ಸ್ವಾಗತಿಸಿ, ರೋಟರಿ ಕ್ಲಬ್ ಉದ್ಯಾವರ ಅಧ್ಯಕ್ಷ ರೋಟೇರಿಯನ್ ಜೀವನ್ ಡಿಸೋಜಾ ವಂದಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.