ಚಿಕ್ಕಬಳ್ಳಾಪುರ: ಪ್ರಿಯತಮೆಯನ್ನು ದೂರವಾಗಿಸಿದ ಹಿನ್ನೆಲೆಯಲ್ಲಿ ಹತಾಶಗೊಂಡ ಪ್ರಿಯಕರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಜಿಲ್ಲಾಸ್ಪತ್ರೆಗೆ ಅಸ್ವಸ್ಥನನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ತಾಲೂಕಿನ ಕವರನಹಳ್ಳಿಯ ಖಾಸಗಿ ಬಸ್ ಚಾಲಕ ಶೇಖರ್ (೩೮) ಅಸ್ವಸ್ಥಗೊಂಡವ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ೧೮ ವರ್ಷದ ಬಿಬಿಎ ವಿದ್ಯಾರ್ಥಿನಿಯೊಂದಿಗೆ ಪ್ರೇಮಾಂಕುರವಾಗಿದೆ. ಒಂದು ವರ್ಷ ಪ್ರೀತಿಸಿದ ಜೋಡಿಗಳು ಗುರುವಾರ ಕದ್ದು ಮುಚ್ಚಿ ಮದುವೆಯಾಗಿದ್ದಾರೆ. ಇದರ ನಡುವೆ ಯುವತಿ ನಾಪತ್ತೆಯಾಗಿರುವುದರ ಬಗ್ಗೆ ಪಾಲಕರು ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಪೊಲೀಸರು ಪ್ರೇಮಿಗಳನ್ನು ಪ್ರತ್ಯೇಕ ಮಾಡಿ, ಪಾಲಕರೊಂದಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ಶೇಖರ್ ಊರಿಗೆ ಹೋಗಿ ವಿಷ ಸೇವಿಸಿದ್ದಾನೆ. ಮನೆಯಲ್ಲಿ ಒದ್ದಾಡುತ್ತಿದ್ದ ಅಸ್ವಸ್ಥನನ್ನು ಸಂಬಂಧಿಕರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
*ಪ್ರಭಾವಿಗಳ ಬೆದರಿಕೆ ಆರೋಪ
ಪೊಲೀಸ್ ಠಾಣೆಯಲ್ಲಿ ಇಬ್ಬರು ಜೋಡಿಗಳು ಪಟ್ಟು ಬಿಡದೇ ಪರಸ್ಪರ ಜತೆಯಾಗಿ ದಾಂಪತ್ಯ ಜೀವನ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಇದರ ನಡುವೆ ಸಿಬ್ಬಂದಿ ಹಾಗೂ ಯುವತಿಯ ಪಾಲಕರು ಆಷಾಡ ಮಾಸ ಮುಗಿದ ಬಳಿಕ ಒಗ್ಗೂಡಿಸಲಾಗುವುದು. ಈಗ ಯುವತಿಯ ಅಜ್ಜಿಯ ಮನೆಗೆ ಇಬ್ಬರು ಹೋಗಿ ಎಂದು ಸಲಹೆ ಕೊಟ್ಟಿದ್ದು ಇದನ್ನು ನಂಬಿ ತೆರಳಿದ ಪ್ರೇಮಿಗಳನ್ನು ಪಾಲಕರು ಮಾರ್ಗ ಮಧ್ಯೆ ಬೇರ್ಪಡಿಸಿದ್ದಾರೆ. ಶೇಖರ್ ನನ್ನು ವಾಹನದಿಂದ ಇಳಿಸಿ ಹೋಗಿದ್ದಾರೆ. ಹಾಗೆಯೇ ಮಾರನೇಯ ದಿನ ಮನೆಯ ಬಳಿಗೆ ಬಂದಾಗ ವಾಪಸ್ ಕಳುಹಿಸಿದ್ದಾರೆ. ಇಬ್ಬರಿಗೂ ವಯಸ್ಸಿನ ದೊಡ್ಡ ಅಂತರದ ಕ್ಯಾತೆ ತೆಗೆದಿದ್ದು ಇದರಿಂದ ಪ್ರಿಯಕರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದೀಗ ಯುವಕನ ಕಡೆಯವರು ಪೊಲೀಸರು ಹಾಗೂ ಯುವತಿಯ ಪಾಲಕರ ವಿರುದ್ಧ ತಿರುಗಿ ಬಿದ್ದಿದ್ದಾರೆ.