ಎಚ್.ಡಿ.ಕೋಟೆ: ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಕಾಳಿದಾಸ ಕುರುಬ ಜನಾಂಗದ ಕ್ಷೇಮಾಭಿವೃದ್ಧಿ ಸಂಘದಲ್ಲಿ ಉದ್ಭವಿಸಿರುವ ಭಿನ್ನಮತಕ್ಕೆ ಮಂಗಳವಾರ ಎರಡು ಬಣಗಳ ಮುಖಂಡರಿಂದ ಪಟ್ಟಣದ ಕನಕ ಭವನದ ಆವರಣದಲ್ಲಿ ನಡೆದ ಪ್ರತ್ಯೇಕ ಸಭೆ ಸಾಕ್ಷಿಯಾಯಿತು.
ಸಂಘದ ತಾಲೂಕು ಅಧ್ಯಕ್ಷ ಮೊಳೆಯೂರು ಆನಂದ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಯಾವುದೇ ಸಭೆ ನಡೆಸಿಲ್ಲ. ಜತೆಗೆ ಸಂಘದ ಲೆಕ್ಕಾಚಾರಗಳನ್ನು ನೀಡಿಲ್ಲ. ಸರ್ಕಾರದ ಅನುದಾನ ಹಾಗೂ ಭವನದ ಆದಾಯವನ್ನು ದುರ್ಬಳಕೆ ಮಾಡಿಕೊಂಡಿದ್ದು, ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿ ಬೇರೆ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಂಬಂಧ ಕನಕ ಭವನದಲ್ಲಿ ಸಭೆ ನಡೆಸಲು ಶಿವಪ್ಪ ಕೋಟೆ ನೇತೃತ್ವದಲ್ಲಿ ಒಂದು ಬಣದ ಮುಖಂಡರು ಮುಂದಾದರು.
ಈ ಸಂದರ್ಭದಲ್ಲಿ ಕನಕ ಭವನಕ್ಕೆ ಬೀಗ ಹಾಕಿದ್ದರಿಂದ ಸಭೆ ನಡೆಸಲು ಬೀಗದ ಕೀ ಕೊಡಿಸಿ ಕೊಡುವಂತೆ ಡಿವೈಎಸ್ಪಿ ಗೋಪಾಲಕೃಷ್ಣ ಅವರಲ್ಲಿ ಮನವಿ ಮಾಡಿದರು. ಭವನಕ್ಕೆ ಬೀಗ ಹಾಕಿರುವುದನ್ನು ನಾನು ತೆಗೆಸಲು ಬರುವುದಿಲ್ಲ. ಭವನದ ಹೊರಗೆ ಸಭೆ ನಡೆಸುವುದಾದರೆ ಪೊಲೀಸ್ ಬಂದೋಬಸ್ತ್ ನೀಡಲಾಗುತ್ತದೆ ಎಂದು ಡಿವೈಎಸ್‌ಪಿ ತಿಳಿಸಿದಾಗ ಭವನದ ಹೊರಗೆ ಸಭೆ ನಡೆಸಲು ತಯಾರಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಹಾಲಿ ಅಧ್ಯಕ್ಷ ಮೊಳೆಯೂರು ಆನಂದ್ ನೇತೃತ್ವದಲ್ಲಿ ಅವರ ಬೆಂಬಲಿಗರು, ಹಾಲಿ ಅಧ್ಯಕ್ಷರಿದ್ದರೂ ಅವರ ರಾಜೀನಾಮೆ ಪಡೆಯದೆ ಅವರ ಅನುಪಸ್ಥಿತಿಯಲ್ಲಿ ಸಭೆ ನಡೆಸುವುದು ನಿಯಮಬಾಹಿರ ಎಂದು ಆರೋಪಿಸಿ ಸಭೆ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಅಡ್ಡಿಪಡಿಸಿದರು.
ಪಟ್ಟುಬಿಡದ ಮತ್ತೊಂದು ಬಣದ ಮುಖಂಡರು ಕೂಡ ಶಿವಪ್ಪ ಕೋಟೆ ನೇತೃತ್ವದಲ್ಲಿ ನೂತನ ಅಧ್ಯಕ್ಷರನ್ನಾಗಿ ಮಾಲೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು. ಇದನ್ನು ವಿರೋಧಿಸಿ ಹಾಲಿ ಅಧ್ಯಕ್ಷ ಮೊಳೆಯೂರು ಆನಂದ ಅವರ ಬಣ ಸಭೆಯಿಂದ ಹೊರ ನಡೆಯಿತು. ಈ ಸಂದರ್ಭದಲ್ಲಿ ಡಿವೈಎಸ್‌ಪಿ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಸೂಕ್ತ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.