ಜಿಲ್ಲೆ

ಕೀಳರಿಮೆ ಬಿಟ್ಟು ಸ್ವಾವಲಂಬಿ ಜೀವನ ನಡೆಸಿ

ಅಂಗವಿಕಲರಿಗೆ ನಗರಸಭೆ ಅಧ್ಯಕ್ಷ ರವೀಂದ್ರ ಕಿವಿಮಾತು ಲಾನುಭವಿಗಳನ್ನು ಅಲೆದಾಡಿಸಬೇಡಿ

ಚಿಕ್ಕಬಳ್ಳಾಪುರ: ಅಂಗವಿಕರು ಕೀಳರಿಮೆ ಬಿಟ್ಟು ಸ್ವಾವಲಂಬಿ ಜೀವನ ನಡೆಸಬೇಕು ಎಂದು ನಗರಸಭೆ ಅಧ್ಯಕ್ಷ ಜೆ.ಗಜೇಂದ್ರ ಕರೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾಡಳಿತ, ಜಿ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಂಗವಿಕಲರ ಕಲ್ಯಾಣ ಸ್ವಯಂ ಸೇವಾ ಸಂಸ್ಥೆಗಳು ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಗವಿಕಲರು ಸರ್ಕಾರ ಕಲ್ಪಿಸುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಗತ್ಯ ಸವಲತ್ತುಗಳಿಗಾಗಿ ಅರ್ಜಿ ಸಲ್ಲಿಸುವ ಫಲಾನುಭವಿಗಳನ್ನು ವಿವಿಧ ಇಲಾಖೆಯ ಅಧಿಕಾರಿಗಳು ಅಲೆದಾಡಿಸಬಾರದು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೆಂಕಟೇಶ್ ರೆಡ್ಡಿ ಮಾತನಾಡಿ, ಅಂಗವಿಕಲರಿಗೆ ಯಾವುದೇ ಸಮಸ್ಯೆ ಇದ್ದಲ್ಲಿ ನೇರವಾಗಿ ಇಲಾಖೆ ಕಚೇರಿಯನ್ನು ಸಂಪರ್ಕಿಸಬೇಕು ಎಂದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ಎನ್.ಎಂ. ಜಗದೀಶ್ ಮಾತನಾಡಿ, ಜಿಲ್ಲಾದ್ಯಂತ ಪ್ರತಿ ಒಂದನೇ ಮತ್ತು ಮೂರನೇ ಬುಧವಾರ ಅಂಗವಿಕಲರ ಮನೆಗೆ ಭೇಟಿ ನೀಡಿ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಅಂಗವಿಕಲರ ಪುನರ್ವಸತಿ ಕೇಂದ್ರವು ಪಂಚಾಯಿತಿ ವ್ಯಾಪ್ತಿಯಲ್ಲಿ ಶಿಬಿರಗಳನ್ನು ಆಯೋಜಿಸುತ್ತಿದ್ದು ಅಂಗವಿಕಲರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳು ಜಿಲ್ಲೆಯಲ್ಲಿ ಗುರುತಿಸಲಾಗಿರುವ ಅರ್ಹ ಫಲಾನುಭವಿಗಳಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಲು ಮುಂದಾಗಬೇಕು ಎಂದರು.

ಶಿಶು ಅಭಿವೃದ್ಧಿ ಅಧಿಕಾರಿ ಗಂಗಾಧರಯ್ಯ, ಶ್ರೀ ಸಾಯಿ ಇಂಟರ್‌ನ್ಯಾಷನಲ್ ಸಂಸ್ಥೆಯ ಸಂಚಾಲಕ ಕೆ.ಎನ್. ಮೂರ್ತಿ, ಆಶಾಕಿರಣ ಸಂಸ್ಥೆಯ ಸಂಚಾಲಕ ಗೋಪಾಲಯ್ಯ, ಪ್ರಜ್ಞಾ ಟ್ರಸ್ಟ್ ಮುಖ್ಯಸ್ಥ ನಾಗರಾಜು, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಗಣೇಶ್, ಜಿಲ್ಲಾ ಸಂಯೋಜಕ ಶ್ರೀನಿವಾಸ್ ಮತ್ತಿತರರು ಇದ್ದರು.

ಅಂಗವಿಕಲರಿಗೆ ವಿಶೇಷ ಆದ್ಯತೆ

ನಗರಸಭೆಯಲ್ಲಿ ಸವಲತ್ತುಗಳನ್ನು ವಿತರಿಸುವಲ್ಲಿ ಅಂಗವಿಕಲರಿಗೆ ವಿಶೇಷ ಆದ್ಯತೆ ನೀಡುವುದಾಗಿ ನಗರಸಭೆ ಅಧ್ಯಕ್ಷರು ಭರವಸೆ ನೀಡಿದರು. ನಗರದ ವಿವಿಧೆಡೆ ನಗರಸಭೆಯಿಂದ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದು ಅಂಗವಿಕಲರು ಸ್ವಾವಲಂಬಿ ಜೀವನ ನಡೆಸುವ ನಿಟ್ಟಿನಲ್ಲಿ ವ್ಯಾಪಾರ ವಹಿವಾಟು ನಿರ್ವಹಿಸಲು ಬಯಸಿದ್ದಲ್ಲಿ ಸರ್ಕಾರಿ ದರದಲ್ಲಿ ಬಾಡಿಗೆಗೆ ನೀಡಲಾಗುವುದು ಎಂದು ತಿಳಿಸಿದರು.

ಸನ್ಮಾನ, ಬಹುಮಾನ ವಿತರಣೆ

ನಗರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 2024-25ನೇ ಸಾಲಿನ ಜಿಲ್ಲಾಮಟ್ಟದ ವಿಕಲಚೇತನರ ಕ್ರೀಡಾಕೂಟದಲ್ಲಿ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಮಾಜ ಸೇವೆ, ಕ್ರೀಡಾ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಸ್ವಯಂ ಉದ್ಯೋಗ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು