ಜಿಲ್ಲೆ

ಸೋಂಕಿತ ವಾಸವಿದ್ದ ಪ್ರದೇಶ ಸೀಲ್‌ಡೌನ್

Belagavi

ರಾಯಬಾಗ: ತಾಲೂಕಿನ ಕುಡಚಿ ಪಟ್ಟಣದ ಕರೋನಾ ಸೋಂಕಿತನೋರ್ವ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಆತ ವಾಸವಾಗಿದ್ದ ಮನೆ ಸುತ್ತಮುತ್ತ ಪ್ರದೇಶವನ್ನು ಅಧಿಕಾರಿಗಳು ಭಾನುವಾರ ಸೀಲ್‌ಡೌನ್ ಮಾಡಿದ್ದಾರೆ.

ಕುಡಚಿ ಪಟ್ಟಣ ಪುರಸಭೆ ಮುಖ್ಯಾಧಿಕಾರಿ ಎಸ್.ಎ. ಮಹಾಜನ, ಪಿಎಸ್‌ಐ ಶಿವರಾಜ ಧರಿಗೊಂಡ ಈ ವೇಳೆ ಇದ್ದರು. ಮೃತಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಕುಡಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಸತೀಶ ಕಲ್ಲಟ್ಟಿ ತಿಳಿಸಿದ್ದಾರೆ.

ದೆಹಲಿ ನಂಟಿನಿಂದಾಗಿ ತಾಲೂಕಿನ ಕುಡಚಿ ಪಟ್ಟಣ ಕರೊನಾ ಹಾಟ್‌ಸ್ಪಾಟ್ ಆಗಿತ್ತು. ಈ ಹಿಂದೆ ಕುಡಚಿ ಪಟ್ಟಣದಲ್ಲಿ ದಾಖಲೆ ಸಂಖ್ಯೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದರಿಂದ ತಾಲೂಕಿನ ಜನರು ಭಯಭೀತರಾಗಿದ್ದರು. ಅವರೆಲ್ಲರೂ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಹಿಂತಿರುಗಿದ ನಂತರ ತಾಲೂಕಿನ ಜನರು ನಿರಾಳವಾಗಿದ್ದರು. ಆದರೆ, ಶನಿವಾರ ಕರೊನಾ ಸೋಂಕಿನಿಂದ ವ್ಯಕ್ತಿಯೋರ್ವ ಮೃತಪಟ್ಟಿದ್ದರಿಂದ ತಾಲೂಕಿನ ಜನರಲ್ಲಿ ಮತ್ತೆ ಭಯ ಆವರಿಸಿದೆ.