ಜಿಲ್ಲೆ

ಪಡಿತರ ಅಕ್ಕಿ ಅನರ್ಹರ ಪಾಲು, ತುಂಬಿದ ಹೊಟ್ಟೆ ಸೇರುತ್ತಿದೆ ಬಡವರ ಅನ್ನ, ಕೇಂದ್ರದ ಯೋಜನೆ ದುರುಪಯೋಗ

Bengaluru Rural

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಕೇಂದ್ರ ಸರ್ಕಾರದ ಮಹತ್ವದ ಯೋಜನೆಯೊಂದು ಅನರ್ಹರ ಪಾಲಾಗುತ್ತಿದೆ. ಆಧಾರ್ ಕಾರ್ಡ್ ಮಾನದಂಡ ದುರುಪಯೋಗ ಮಾಡಿಕೊಂಡು ಉಳ್ಳವರೂ ಬಡವರ ಅನ್ನಕ್ಕೆ ಕನ್ನ ಹಾಕುತ್ತಿದ್ದಾರೆ.

ಹೌದು! ಲಾಕ್‌ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಹಾಗೂ ಬಡತನ ರೇಖೆಯ ಒಳಗಿನವರಿಗಾಗಿ ಮೇ 26ರಿಂದ ಆರಂಭವಾದ ಪಡಿತರ ವಿತರಣೆ ಯೋಜನೆ ಜಿಲ್ಲೆಯಲ್ಲಿ ಅಕ್ರಮಕ್ಕೆ ಎಡೆಮಾಡಿಕೊಟ್ಟಿದೆ ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ ಶೇ.80 ವಲಸೆ ಕಾರ್ಮಿಕರು ಸ್ವಗ್ರಾಮಗಳಿಗೆ ತೆರಳಿದ್ದು, ಉಳಿದ ಕಾರ್ಮಿಕರಿಗೆ ದಕ್ಕಬೇಕಾದ ಪಡಿತರ ಉಳ್ಳವರ ಪಾಲಾಗುತ್ತಿದೆ. ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಜಾರಿಯಾದ ಆತ್ಮನಿರ್ಭಯ ಭಾರತ ಯೋಜನೆಯನ್ನು ಹೊಟ್ಟೆ ತುಂಬಿದವರೇ ಕಸಿಯುತ್ತಿರುವುದು ದುರಂತ.

ಲಾಕ್‌ಡೌನ್ ೋಷಣೆಯಾದ ಬಳಿಕ 2 ತಿಂಗಳ ಮುಂಗಡ ಪಡಿತರ ವಿತರಣೆ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಇಲಾಖೆ ಈ ಯೋಜನೆಯಲ್ಲಿ ಅರ್ಹರನ್ನು ಗುರುತಿಸುವಲ್ಲಿ ಅಸಹಾಯಕವಾಗಿದೆ. ಮುಂಗಡ ಪಡಿತರ ಯೋಜನೆಯಡಿ ಪಡಿತರ ಚೀಟಿ ಕಡ್ಡಾಯವಾಗಿತ್ತು. ಈ ಯೋಜನೆಯಡಿ ಆಧಾರ್‌ಕಾರ್ಡ್ ಮಾತ್ರ ಮಾನದಂಡವಾಗಿದೆ. ಇದರಿಂದ ಅರ್ಹ ಲಾನುಭವಿಗಳನ್ನು ಗುರುತಿಸುವುದು ಸಾಧ್ಯವಿಲ್ಲ ಎಂಬುದು ಇಲಾಖೆ ಅಧಿಕಾರಿಗಳ ಸಂಕಟವಾಗಿದೆ.

ಮೇ ತಿಂಗಳಲ್ಲಿ ಹೆಚ್ಚು ಅಕ್ರಮ: ಈ ಯೋಜನೆ ಮೇ 26ರಿಂದ ಜೂ.10ರವರೆಗೆ ನಿಗದಿಯಾಗಿದೆ. ಲಾನುಭವಿಗಳಿಗೆ 5 ಕೆಜಿ ಅಕ್ಕಿ ವಿತರಣೆ ಜಾರಿಯಾಗಿದೆ. ಮೇ ತಿಂಗಳಲ್ಲಿ ಪಡಿತರ ಪಡೆಯದವರು ಜೂನ್‌ನಲ್ಲಿ ಎರಡೂ ತಿಂಗಳು ಸೇರಿ 10 ಕೆಜಿ ಪಡಿತರ ಪಡೆಯಲು ಅವಕಾಶವಿದೆ. ಆರಂಭದಲ್ಲಿ ಈ ಯೋಜನೆ ಅರ್ಹರಿಗೆ ದೊರೆಯಿತು. ಆದರೆ ಮೇ ತಿಂಗಳಲ್ಲಿ ಬಹುಪಾಲು ವಲಸೆ ಕಾರ್ಮಿಕರು ಸ್ವಗ್ರಾಮಕ್ಕೆ ತೆರಳಿರುವುದರಿಂದ ಆಧಾರ್‌ಕಾರ್ಡ್ ತೋರಿಸಿ ಉಳ್ಳವರೇ ಯೋಜನೆಯ ಅಕ್ಕಿ ಬಾಚಿಕೊಳ್ಳುತ್ತಿದ್ದಾರೆ.

ಒಬ್ಬರಿಂದ ಮತ್ತೊಬ್ಬರಿಗೆ ಮಾಹಿತಿ: ಈ ಯೋಜನೆಯಡಿ ಸುಲಭವಾಗಿ ಅನರ್ಹರು ಪಡಿತರ ಪಡೆಯುವ ಸಾಧ್ಯತೆ ಬಗ್ಗೆ ತಿಳಿದ ಹಲವರು ಒಬ್ಬರಿಂದ ಮತ್ತೊಬ್ಬರಿಗೆ ಮಾಹಿತಿ ರವಾನಿಸುತ್ತಿದ್ದು, ಯೋಜನೆ ಅಂತಿಮ ಗಡುವು ಸಮೀಪಿಸುತ್ತಿದ್ದಂತೆ ಹೆಚ್ಚೆಚ್ಚು ಅನರ್ಹರು ಯೋಜನೆ ಬಳಕೆಗೆ ಮುಂದಾಗುತ್ತಿದ್ದಾರೆ.

ಕಾರ್ಡ್‌ದಾರರಿಂದಲೂ ಅಕ್ರಮ: ಈಗಾಗಲೇ ಪಡಿತರ ಪಡೆದಿರುವ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ದಾರರೂ ಸಹ ಈ ಯೋಜನೆಯಡಿ ಮತ್ತೊಮ್ಮೆ ಅಧಾರ್‌ಕಾರ್ಡ್ ತೋರಿಸಿ ಪಡಿತರ ಪಡೆಯುತ್ತಿದ್ದಾರೆ. ಸ್ವಸ್ಥಾನದಲ್ಲಿ ಇಲ್ಲದವರ ಆಧಾರ್‌ಕಾರ್ಡ್ ಜೆರಾಕ್ಸ್ ತರಿಸಿಕೊಂಡು ಅದನ್ನೇ ತೋರಿಸಿ ಮತ್ತಷ್ಟು ಅಕ್ರಮ ಎಸಗುತ್ತಿರುವುದು ಕಂಡುಬರುತ್ತಿದೆ.

ಯೋಜನೆ ದುರುಪಯೋಗ ಮಾಡಿಕೊಂಡರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಆದೇಶದಡಿ ಶಿಸ್ತು ಕ್ರಮ ಜರುಗಿಸಲಾಗುವುದು, ಆಧಾರ್ ಕಾರ್ಡ್ ಮಾನದಂಡವಾದರೂ ಅವರ ಪೂರ್ವಾಪರ ವಿಚಾರಿಸಿಯೇ ಪಡಿತರ ವಿತರಿಸಲು ಸೂಚಿಸಲಾಗಿದೆ. ಸುಬ್ರಹ್ಮಣ್ಯ, ಆಹಾರ ಇಲಾಖೆ ಉಪನಿರ್ದೇಶಕ ಬೆಂ.ಗ್ರಾ ಜಿಲ್ಲೆ