ಆರ್. ಕೃಷ್ಣ ಮೈಸೂರು
ಸರ್ಕಾರಿ ಸವಲತ್ತಿಗಾಗಿ ತಾವೂ ಕಟ್ಟಡ ಕಾರ್ಮಿಕರು ಎಂದು ಹೆಸರು ನೋಂದಾಯಿಸಿಕೊಂಡ ನಕಲಿ ಕಾರ್ಮಿಕರ ಪತ್ತೆಗೆ ಕಾರ್ಮಿಕ ಇಲಾಖೆ ಮುಂದಾಗಿದೆ.
ದಿನದ ವೇತನಕ್ಕೆ ಕೆಲಸ ಮಾಡದ ಇವರು, ದಿನಗೂಲಿಗಾಗಿ ಕೆಲಸ ಮಾಡುವ ಕಟ್ಟಡ ಕಾರ್ಮಿಕರ ಪಟ್ಟಿಯಲ್ಲೂ ನಕಲಿ ಕಾರ್ಮಿಕರಿದ್ದಾರೆ. ಇವರು ಸರ್ಕಾರಿ ಸೌಲಭ್ಯ-ಸವಲತ್ತು ಪಡೆಯಲು ಮಾತ್ರ ಹೆಸರಿಗೆ ಕಟ್ಟಡ ಕಾರ್ಮಿಕರಾಗಿದ್ದಾರೆ.
ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಕಟ್ಟಡ ಕಾರ್ಮಿಕರ ನೋಂದಣಿಯಾಗಿದ್ದು, ಸುಳ್ಳು ದಾಖಲೆ ನೀಡಿ ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಕೊಂಡಿರುವ ನಕಲಿ ಕಟ್ಟಡ ಕಾರ್ಮಿಕರ ಪತ್ತೆ ಕಾರ್ಯ ನಡೆದಿದೆ.
ಬೋಗಸ್ ಕಾರ್ಡ್‌ಗಳ ಹಾವಳಿ ತಪ್ಪಿಸಲು ಕಾರ್ಮಿಕ ಇಲಾಖೆ ಹೊಸ ಮಾರ್ಗೋಪಾಯ ಕಂಡುಕೊಂಡಿದ್ದು, ಕಟ್ಟಡ ಕಾರ್ಮಿಕರ ನೋಂದಣಿ ಮತ್ತು ನವೀಕರಣಕ್ಕೆ ಹೊಸ ನಿಯಮ ಜಾರಿಗೊಳಿಸಿದೆ.
ಕಟ್ಟಡ ಕಾರ್ಮಿಕರು ವೇತನ ಚೀಟಿ ಮತ್ತು ಉದ್ಯೋಗ ಪ್ರಮಾಣ ಪತ್ರ ಮತ್ತು ಹಾಜರಾತಿ ನೀಡುವುದು ಕಡ್ಡಾಯಗೊಳಿಸುವ ಮೂಲಕ ನಕಲಿ ಕಟ್ಟಡ ಕಾರ್ಮಿಕರಿಗೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದೆ.
ಜಿಲ್ಲೆಯಲ್ಲಿ ಒಟ್ಟು 1,69,268 ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದು, ಅವರಿಗೆ ಸರ್ಕಾರಿ ಸೌಲಭ್ಯ ಪಡೆಯಲು ಅನುಕೂಲವಾಗುವಂತೆ ಕಾರ್ಡ್ ವಿತರಣೆ ಮಾಡಲಾಗಿದೆ. ಆದರೆ ಅದರಲ್ಲಿ ಸೇರಿಕೊಂಡಿರುವ ನಕಲಿ ಕಾರ್ಮಿಕರ ಹುಡುಕಾಟ ನಡೆದಿದ್ದು, ಇದುವರೆಗೆ ಜಿಲ್ಲೆಯಲ್ಲಿ 657 ನಕಲಿ ಕಟ್ಟಡ ಕಾರ್ಮಿಕರನ್ನು ಪತ್ತೆ ಮಾಡಿ, ಅದರಲ್ಲಿ 586 ನಕಲಿ ಕಾರ್ಮಿಕರ ಕಾರ್ಡ್ ರದ್ದುಗೊಳಿಸಿದೆ. ಅಲ್ಲದೇ ಅಂತಹವರ ವಿರುದ್ಧ ಇಲಾಖೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿದೆ.
ನಕಲಿ ಕಾರ್ಮಿಕರು ಮತ್ತೆ ಕಾರ್ಡ್‌ಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸದಂತೆ ತಡೆಯಲು ತಂತ್ರಾಂಶದಲ್ಲಿಯೂ ಅವರ ದಾಖಲೆಯನ್ನು ಫ್ರೀಜ್ ಮಾಡಲಾಗಿದ್ದು, ಜಿಲ್ಲೆಯಲ್ಲಿ 561 ಮಂದಿಯ ದಾಖಲೆ ಫ್ರೀಜ್ ಆಗಿದೆ.
ಕಟ್ಟಡ ಕಾರ್ಮಿಕರಲ್ಲದವರೂ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಅಕ್ರಮವಾಗಿ ಕಟ್ಟಡ ಕಾರ್ಮಿಕರೆಂದು ಸುಳ್ಳು ದಾಖಲೆ ನೀಡಿ ನೋಂದಣಿ ಮಾಡಿಕೊಳ್ಳುವ ದಂಧೆ ನಡೆಯುತ್ತಿದೆ.
ಇಲಾಖೆ ಅಧಿಕಾರಿಗಳ ಪರಿಶೀಲನೆಗೂ ಮೊದಲೇ ಕಾರ್ಮಿಕರಲ್ಲದವರು ಕಾರ್ಡ್ ಹೊಂದಿದ್ದರೆ ಸ್ವಯಂ ಪ್ರೇರಿತವಾಗಿ ವಾಪಸ್ ನೀಡುವ ಅವಕಾಶವನ್ನೂ ಕಲ್ಪಿಸಲಾಗಿದೆ. ಒಂದೊಮ್ಮೆ ವಾಪಸ್ ಮಾಡದಿದ್ದರೆ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
33,500 ಮಂದಿಗೆ ಆರೋಗ್ಯ ತಪಾಸಣೆ ಗುರಿ
ಕಟ್ಟಡ ಕಾರ್ಮಿಕರ ಆರೋಗ್ಯ ಕಾಪಾಡಲು ಮುಂದಾಗಿರುವ ಇಲಾಖೆ 20ಕ್ಕೂ ಹೆಚ್ಚು ಬಗೆಯ ವೈದ್ಯಕೀಯ ಪರೀಕ್ಷೆಗೆ ಅವಕಾಶ ಕಲ್ಪಿಸಿದೆ.
ಕಾರ್ಮಿಕರು ಮತ್ತು ಅವರ ಕುಟುಂಬದವರಿಗೆ ಈ ಸೌಲಭ್ಯ ಸಿಗಲಿದ್ದು, ಈಗಾಗಲೇ ಎಂಟು ಸಾವಿರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಈ ವರ್ಷ 33,500 ಮಂದಿಗೆ ಆರೋಗ್ಯ ತಪಾಸಣೆ ನಡೆಸುವ ಗುರಿಯನ್ನು ಇಲಾಖೆ ಹೊಂದಿದೆ.
ಮೈಸೂರು, ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ತಿ.ನರಸೀಪುರ ತಾಲೂಕುಗಳಲ್ಲಿ ಈ ಯೋಜನೆ ಅಡಿ ಸೌಲಭ್ಯ ಪಡೆಯಲು ಕಾರ್ಮಿಕರು ಮುಂದಾಗಿದ್ದಾರೆ. ನಂಜನಗೂಡು, ಸರಗೂರು, ಸಾಲಿಗ್ರಾಮ ತಾಲೂಕುಗಳಲ್ಲಿ ಸೌಲಭ್ಯವಿದ್ದರೂ ಬಳಕೆ ಮಾಡಿಕೊಳ್ಳಲು ಕಾರ್ಮಿಕರು ಮುಂದೆ ಬರುತ್ತಿಲ್ಲ.
ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕ ಹಿತದೃಷ್ಟಿಯಿಂದ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆ ಮತ್ತು ತರಬೇತಿ ಶಿಬಿರಗಳನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ.
ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿನ ಕಾರ್ಮಿಕ ಇಲಾಖೆಯ ಕಚೇರಿಗಳಲ್ಲಿ ನಿತ್ಯ ತಜ್ಞ ವೈದ್ಯರ ತಂಡದಿಂದ ತಪಾಸಣೆ ಕಾರ್ಯ ನಡೆಸುತ್ತಿದೆ. ಕಾರ್ಮಿಕರು ಬಿಡುವಿನ ವೇಳೆಯಲ್ಲಿ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ.
3ರಿಂದ 3,500 ರೂ.ವೆಚ್ಚವಾಗಲಿರುವ 20ಕ್ಕೂ ಹೆಚ್ಚು ತಪಾಸಣೆ ನಡೆಸಲಾಗುತ್ತಿದ್ದು, ವೈದ್ಯರ ಸಮಾಲೋಚನೆಯೊಂದಿಗೆ ಬಿಪಿ, ಶುಗರ್, ಬ್ಲಡ್ ಟೆಸ್ಟ್, ಕೊಬ್ಬಿನಾಂಶ ಪರೀಕ್ಷೆ, ಕಿಡ್ನಿ, ಲಿವರ್, ಮೂತ್ರ ಪಿಂಡ, ಶ್ವಾಸಕೋಶ, ಥೈರಾಯ್ಡ್ ಪರೀಕ್ಷೆ, ಜಿಜಿಟಿಪಿ ಪರೀಕ್ಷೆ, ಹೆಪಟೈಟಿಸ್ ಸೇರಿದಂತೆ ಇನ್ನಿತರ ಪರೀಕ್ಷೆ ಮಾಡಲಾಗುವುದು.
ವಾಪಸ್ ನೀಡುವಂತೆ ಜಾಗೃತಿ
ಕಟ್ಟಡ ಕಾರ್ಮಿಕರಲ್ಲದವರು ಕಾರ್ಡ್ ವಾಪಸ್ ನೀಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ನಕಲಿ ಕಾರ್ಡ್‌ದಾರರಿಂದ ನಿಜವಾದ ಫಲಾನುಭವಿಗಳು ಸೌಲಭ್ಯ ವಂಚಿತರಾಗುತ್ತಾರೆ. ಆದ್ದರಿಂದ ಅರ್ಹ ಕಟ್ಟಡ ಕಾರ್ಮಿಕರನ್ನು ಗುರುತಿಸಿ ನೋಂದಣಿ ಕಾರ್ಡ್ ನೀಡಲಾಗುತ್ತಿದೆ. ಜತೆಗೆ ಕಟ್ಟಡ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಅವರಿಗೆ ಹಾಗೂ ಕುಟುಂಬದವರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು.
ಚೇತನ್, ಜಿಲ್ಲಾ ಕಾರ್ಮಿಕ ಅಧಿಕಾರಿ