ಜಿಲ್ಲೆ

ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಲು ಸಚಿವರ ಸೂಚನೆ

ತುಮಕೂರು: ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ 6,92,508 ಪಡಿತರ ಚೀಟಿಗಳ ಪೈಕಿ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ರದ್ದುಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಖಡಕ್​ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಮೊದಲನೇ ಕೆಡಿಪಿ ಸಭೆಯ ಅಧ್ಯಕ್ಷ್ಷತೆ ವಹಿಸಿ ಮಾತನಾಡಿದ ಅವರು, ಆದಾಯ ತೆರಿಗೆ ಪಾವತಿ ಮಾಡುವ, ಕುಟುಂಬದ ಆದಾಯ 1.20 ಲಕ್ಷ ರೂ.,ಗಳಿಗಿಂತ ಹೆಚ್ಚಿರುವ, ಸರ್ಕಾರಿ ನೌಕರರು, 3 ಹೆಕ್ಟೇರ್​ಗಿಂತ ಹೆಚ್ಚು ಭೂಮಿ ಹೊಂದಿರುವ ಪಡಿತರ ಚೀಟಿಗಳನ್ನು ರದ್ದುಪಡಿಸಲು ಹಿಂದಿನ ಸಭೆಯಲ್ಲಿ ಸೂಚಿಸಲಾಗಿದ್ದರೂ ಕೇವಲ 98,893 ಪಡಿತರ ಚೀಟಿಗಳನ್ನು ಮಾತ್ರ ರದ್ದುಪಡಿಸಲಾಗಿದೆ. ಉಳಿದ ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿಗೆ ಸೂಚಿಸಿದರು.

ಸಭೆಯಲ್ಲಿ ಸಹಕಾರ ಸಚಿವ ಕೆ.ಎನ್​. ರಾಜಣ್ಣ, ಸಂಸದ ಗೋವಿಂದ ಕಾರಜೋಳ, ನವದೆಹಲಿಯ ಕರ್ನಾಟಕ ರಾಜ್ಯ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ, ಕೆಎಸ್​ಆರ್​ಟಿಸಿ ನಿಗಮದ ಅಧ್ಯಕ್ಷ ಎಸ್​.ಆರ್​. ಶ್ರೀನಿವಾಸ್​, ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್​, ಡಾ.ಎಚ್​.ಡಿ. ರಂಗನಾಥ್​, ಕೆ.ಷಡಾಕ್ಷರಿ, ಎಂ.ಟಿ.ಕೃಷ್ಣಪ್ಪ, ಬಿ.ಸುರೇಶ್​ಗೌಡ, ಎಚ್​.ವಿ. ವೆಂಕಟೇಶ್​, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್​, ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ ಕೆ.ವಿ. ಅಶೋಕ್​, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಮತ್ತಿತರರು ಉಪಸ್ಥಿತರಿದ್ದರು.