ಜಿಲ್ಲೆ

ಅಭಿವೃದ್ಧಿಗೆ ಕೈಗಾರಿಕೆಗಳ ಸಹಕಾರ ಅವಶ್ಯ, ಶಾಸಕ ಕೃಷ್ಣಪ್ಪ ಅಭಿಮತ, ಕರೊನಾ ವಾರಿಯರ್ಸ್‌ಗೆ ಸನ್ಮಾನ

Bengaluru Rural

ಆನೇಕಲ್: ಜಿಗಣಿ ಭಾಗದ ಅಭಿವೃದ್ಧಿಗೆ ಸ್ಥಳೀಯ ಕೈಗಾರಿಕೆಗಳ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ಎಂ. ಕೃಷ್ಣಪ್ಪ ಹೇಳಿದರು.

ಜಿಗಣಿಯ ನಿತ್ಯಾನಂದ ಕಾಲೇಜಿನಲ್ಲಿ ಬುಧವಾರ ಕರೊನಾ ವಾರಿಯರ್ಸ್‌ಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಜಿಗಣಿ ಕೆರೆ ಅಭಿವೃದ್ಧಿಗೆ ಈಗಾಗಲೇ 9 ಕೋಟಿ ಬಂದಿದೆ. ಈ ಹಣದಲ್ಲಿ ಶೀಘ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.

ಕರ್ತವ್ಯದ ಜತೆ ಕರೊನಾ ಸಂದರ್ಭದಲ್ಲಿ ಸಂತ್ರಸ್ತರಿಗಾಗಿ ಶ್ರಮಿಸಿದ ಜಿಗಣಿ ಠಾಣೆ ಇನ್ಸ್‌ಸ್ಪೆಕ್ಟರ್ ಕೆ. ವಿಶ್ವನಾಥ್ ಅವರು ಸಮಾಜಕ್ಕೆ ಮಾದರಿ. ಪ್ರತಿದಿನ ಸಾವಿರಾರು ಜನರಿಗೆ ವಿವಿಧ ಸಂಸ್ಥೆಗಳ ಸಹಕಾರ ಪಡೆದು ಊಟದ ವ್ಯವಸ್ಥೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪುರಸಭೆಯಿಂದ ಹತ್ತು ಸಾವಿರ ಗಿಡಗಳನ್ನು ವಿತರಿಸಿ, ಹಸಿರೀಕರಣ ಮಾಡಲು ಮುಂದಾಗಬೇಕು. ಪುರಸಭಾ ಸದಸ್ಯರು ಕೂಡ ಪ್ರತಿ ಮನೆಗೆ ಎರಡು ಗಿಡ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದರು.

ಜಿಗಣಿ ಠಾಣೆಯ ಇನ್‌ಸ್ಪೆಕ್ಟರ್ ಕೆ.ವಿಶ್ವನಾಥ್ ಮಾತನಾಡಿ, ಶಾಸಕರು ಕರೊನಾ ವಾರಿಯರ್‌ಗಳಿಗೆ ಸಾಕಷ್ಟು ಉತ್ತೇಜನ ನೀಡಿದ್ದಾರೆ. ಪ್ರತಿದಿನವೂ ಹಲವು ಸವಾಲು ನಿಭಾಯಿಸಿ ಕರೊನಾ ಸೋಂಕು ತಡೆಗೆ ಸಾಕಷ್ಟು ಶ್ರಮಿಸಲಾಗಿದೆ ಎಂದರು.

ಖಾಸಗಿ ಆಸ್ಪತ್ರೆಗಳು ದುಬಾರಿ ಶುಲ್ಕವನ್ನು ವಸೂಲಿ ಮಾಡುತ್ತಿದ್ದರಿಂದ ಬಡವರಿಗೆ ತೊಂದರೆಯಾಗುತ್ತಿತ್ತು. ಶಾಸಕರ ಗಮನ ಸೆಳೆದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಕೋವಿಡ್ ಸೆಂಟರ್ ತೆರೆಯುವ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗೆಯೇ ಎಲ್ಲ ಖಾಸಗಿ ಕಂಪನಿಗಳು ಸೋಂಕು ತಡೆಗೆ ಸಹಕಾರ ನೀಡಿದ್ದಾರೆ ಎಂದರು.

ಟೈ ಇಂಡಿಯಾ ಸಂಸ್ಥೆ ಡೈರೆಕ್ಟರ್ ಪರಮೇಶ್ವರನ್ ಬಾಲಕೃಷ್ಣನ್ ಮಾತನಾಡಿ, ಜಿಗಣಿಯಲ್ಲಿ ಕಂಪನಿಗಳು ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ ಎಲ್ಲರೂ ಸಹಕರಿಸುತ್ತಿದ್ದಾರೆ. ಈಗಾಗಲೇ ಕಲ್ಲುಬಾಳು ಕೆರೆಯನ್ನು ಸಂಸ್ಥೆಯಿಂದ ಅಭಿವೃದ್ಧಿ ಮಾಡಲಾಗಿದೆ ಎಂದರು.

ಜಿಗಣಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಲತಾ, ಹಾರಗದ್ದೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ನೀತಾರೆಡ್ಡಿ, ಜಿಗಣಿ ಪುರಸಭೆ ಮುಖ್ಯಾಧಿಕಾರಿ ಅಮರನಾಥ, ಬಿಜೆಪಿ ಮುಖಂಡರಾದ ಮೆಡಿಕಲ್ ಬಾಬು, ಕೇಬಲ್ ನಾಗರಾಜು, ಎನೇಬಲ್ ಟ್ರಸ್ಟ್ ಮುಖ್ಯಸ್ಥ ಚೇತನ್, ಟೈ ಇಂಡಿಯಾ ಸಂಸ್ಥೆ ಸಿಬ್ಬಂದಿ ಸಂತೋಷ್‌ರಾವ್, ವಿವೇಕ್, ಅಶ್ವಿನ್, ಬಿಜೆಪಿ ಮಂಡಲ ಉಪಾಧ್ಯಕ್ಷ ವೈ. ರಾಮಚಂದ್ರ, ಪುರಸಭಾ ನಾಮನಿರ್ದೇಶಿತ ಸದಸ್ಯ ಗಿರೀಶ್ ಇತರರು ಹಾಜರಿದ್ದರು.