ಜಿಲ್ಲೆ

ತಂತ್ರಜ್ಞಾನ ಮುಂದುವರಿದಂತೆ ಕೈಗಾರಿಕೆಗಳು ಹೆಚ್ಚು

Mysuru

ಮೈಸೂರು: ದೇಶದಲ್ಲಿ ಅತಿಯಾದ ಕೈಗಾರೀಕರಣದಿಂದಾಗಿ ಗ್ರಾಮೀಣ ಮತ್ತು ಬುಡಕಟ್ಟು ಜನರ ಅಸ್ಮಿತೆಯ ಪ್ರಶ್ನೆ ಎದುರಾಗಿದ್ದು, ಮಾನವೀಯತೆಯಿಂದ ಕೂಡಿರುವ ಅಭಿವೃದ್ಧಿಯ ಅವಶ್ಯಕತೆ ಇದೆ ಎಂದು ರಾಯಚೂರು ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಪ್ರೊ.ಮುಜಾಫರ್ ಅಸಾದಿ ಹೇಳಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ಡಿ.ಸಿ.ನಂಜುಂಡ ಅವರ ‘ಅಪೂರ್ವ ಜಾರ್ಖಂಡ್’ ಮತ್ತು ‘ಹಂದಿನೆಂಟನೆಯ ಅಕ್ಷ ರೇಖೆ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದಂತೆ ಕೈಗಾರಿಕೆಗಳು ಹೆಚ್ಚಾಗುತ್ತಿವೆ. ಪರಿಣಾಮ ನಮ್ಮ ಪ್ರಾಕೃತಿಕ ಸಂಪನ್ಮೂಲ ನಾಶವಾಗುತ್ತಿದೆ ಎಂದರು.

ಅಭಿವೃದ್ಧಿ ಪರಿಕಲ್ಪನೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾದಂತೆ ಅಭಿವೃದ್ಧಿಯ ವೇಗ ಕುಂಠಿತವಾಗುತ್ತದೆ. ದೇಶದ ಬೇರೆ ಭಾಗಗಳಲ್ಲಿ ತಕ್ಕಮಟ್ಟಿಗಾದರೂ ಅಭಿವೃದ್ಧಿ ಆಗುತ್ತಿದೆ. ಆದರೆ, ಜಾರ್ಖಂಡ್‌ನಲ್ಲಿ ಅದು ಸಾಧ್ಯವಾಗುತ್ತಿಲ್ಲ. ಮುಖ್ಯವಾಗಿ ಭಾರತದಲ್ಲಿನ ಸಾಮಾಜಿಕ ಪ್ರಗತಿಯ ಆಯಾಮಗಳು ಮತ್ತಷ್ಟು ಸ್ಪಷ್ಟವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಅಭಿವೃದ್ಧಿ ಎಂದರೆ ಕೇವಲ ಕೈಗಾರೀಕರಣ, ಜಾಗತೀಕರಣವಲ್ಲ. ಪ್ರತಿಯೊಂದು ಸಮುದಾಯವು ಅಭಿವೃದ್ಧಿಯ ಪರಿಕಲ್ಪನೆಯನ್ನು ಹೊಂದಬೇಕು. ಆಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗಲಿದೆ ಎಂದರು.

ಜೈನ್ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ.ಭಾರ್ಗವ ಹೆಮ್ಮಿಗೆ ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕು. ವಿಶ್ವದ ಹಲವಾರು ದೇಶಗಳು ಪ್ರವಾಸೋದ್ಯಮವನ್ನು ನಂಬಿ ಇಂದಿಗೂ ಬದುಕುತ್ತಿವೆ. ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮದ ಪಾತ್ರ ಬಹಳ ಮಹತ್ವವಾದದ್ದು ಎಂದರು.

ಲೇಖಕ ಡಾ.ಡಿ.ಸಿ.ನಂಜುಂಡ, ಕೌಟಿಲ್ಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಆರ್.ರಘು, ಮಹಾರಾಜ ಕಾಲೇಜಿನ ಮನಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ.ಲ್ಯಾನ್ಸಿ ಡಿಸೋಜಾ ಇದ್ದರು.