ಜಿಲ್ಲೆ

ಪಾಲಿಕೆಯಲ್ಲಿ 7 ಕೋಟಿ ರೂ. ತೆರಿಗೆ ವಂಚನೆ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಇಲ್ಲಿನ ಉದ್ಯಮಬಾಗ ಕೈಗಾರಿಕೆ ಪ್ರದೇಶದಲ್ಲಿರುವ ವೇಗಾ ಹೆಲ್ಮೇಟ್ ತಯಾರಿಕಾ ಘಟಕ ಆಸ್ತಿ ತೆರಿಗೆ ವಸೂಲಾತಿ, ತೆರಿಗೆ ವಂಚನೆಯಿಂದ ಪಾಲಿಕೆಗೆ 7 ಕೋಟಿ ರೂ. ತೆರಿಗೆ ವಂಚನೆಯಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತ ಅಧೀಕ್ಷಕರಿಗೆ ಪಾಲಿಕೆ ಆಯುಕ್ತೆ ಶುಭ ಬಿ.ದೂರು ಸಲ್ಲಿಸಿದ್ದಾರೆ.

ಉದ್ಯಮಬಾಗ ಕೈಗಾರಿಕೆ ಪ್ರದೇಶದ ಆಸ್ತಿ ನಂ. 690 ಪ್ಲಾಟ್ ನಂ. 12/ಎ. ಪಿಐಡಿ ಸಂಖ್ಯೆ 83158 ಹಾಗೂ 12ಬಿ ಪಿಐಡಿ 47082 ಆಸ್ತಿಯು ದಿಲೀಪ ಚಂಡಕ ಮತ್ತು ಇತರರ ಹೆಸರಿನಲ್ಲಿದೆ. ಕೈಗಾರಿಕಾ ವೇಗಾ ಹೆಲ್ಮೇಟ್ ತಯಾರಿಕಾ ಘಟಕ ಆಸ್ತಿ ಮರುಮಾಪನ ಮಾಡಿದ್ದು, 2024-25ನೇ ಸಾಲಿನ ತೆರಿಗೆ ಮಾತ್ರ ಪಾವತಿಸಿದ್ದಾರೆ. ಹಿಂದಿನ ಬಾಕಿ ವರ್ಷದ ವ್ಯತ್ಯಾಸದ ಮೊತ್ತವನ್ನು ಪಾವತಿಸುತ್ತಿಲ್ಲ.

ಈಗಾಗಲೇ ಪಾಲಿಕೆ ಆಯುಕ್ತರ ಕೋರ್ಟ್‌ನಲ್ಲಿ 7,08,66,578 ರೂ. ಬಾಕಿ ತೆರಿಗೆ ಕಟ್ಟುವಂತೆ ಮಾಲೀಕರಿಗೆ ಆದೇಶಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ತೆರಿಗೆ ಪಾವತಿ ಆಗಿಲ್ಲ. ಹೀಗಾಗಿ ಆಸ್ತಿ ತೆರಿಗೆ ವಸೂಲಾತಿ ಮಾಡುವುದು ಹಾಗೂ ಆಸ್ತಿಗೆ ಸಂಬಂಧಿಸಿದ ತೆರಿಗೆ ವಂಚನೆ ಕುರಿತು ಮೇಲ್ನೋಟಕ್ಕೆ ಲೋಪದೋಷಗಳು ಕಂಡು ಬಂದಿವೆ. ಪಾಲಿಕೆಗೆ ಬರಬೇಕಾಗಿದ್ದ 7 ಕೋಟಿ ರೂ. ತೆರಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆಗೆ ವಹಿಸುವಂತೆ ಪಾಲಿಕೆ ಪರಿಷತ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಹೀಗಾಗಿ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿಚಾರಣೆ ನಡೆಸಿ ಪಾಲಿಕೆಗೆ ವರದಿ ಸಲ್ಲಿಸಬೇಕು. ಜತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.