ಉಡುಪಿ: ನಗರದ ಜೀವನದಿ ಇಂದ್ರಾಣಿ ಸ್ವಚ್ಛತೆಗಾಗಿ ಉಡುಪಿ ನಗರಸಭೆ ವಿಶಿಷ್ಟ ಯೋಜನೆ ರೂಪಿಸಲು ಮುಂದಾಗಿದ್ದು, ಇದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲಾಗುತ್ತಿದೆ. ದೂರದೃಷ್ಟಿತ್ವ ಯೋಜನೆ ಇಟ್ಟುಕೊಂಡು ಯೋಜನೆ ಸಿದ್ಧಪಡಿಸಲಾಗುತ್ತಿದೆ. ನಗರದಲ್ಲಿ ಶೇ.15ರಷ್ಟು ಮಾತ್ರ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿದ್ದು, ಇದನ್ನು ಪುನಶ್ಚೇತನಗೊಳಿಸುವ ಸಲುವಾಗಿ ಸರ್ವೇ ಕೆಲಸ ನಡೆಯುತ್ತಿದೆ. ಈ ಮೂಲಕ ನಗರಸಭೆ ವ್ಯಾಪ್ತಿ ಚರಂಡಿ, ಕೊಳಚೆ, ತ್ಯಾಜ್ಯ ನೀರು ಇಂದ್ರಾಣಿ ನದಿ ಸೇರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಒಳಚರಂಡಿ ಸೋರಿಕೆ: ಮನೆ, ಫ್ಲಾೃಟ್‌ಗಳು, ಅಂಗಡಿ, ಹೋಟೆಲ್‌ಗಳ ಕೊಳಚೆ ನೀರು, ಶೌಚಗೃಹದ ನೀರು ಅಲ್ಲಲ್ಲಿ ಮ್ಯಾನ್‌ಹೋಲ್‌ಗಳ ಮೂಲಕ ಒಳಚರಂಡಿ ಸೇರುತ್ತಿವೆ. ಅಲ್ಲಿಂದ ನಿಟ್ಟೂರಿನಲ್ಲಿರುವ ಶುದ್ಧೀಕರಣ ಘಟಕಕ್ಕೆ ಹರಿಯುತ್ತದೆ. ಅಲ್ಲಿ ಶುದ್ಧಗೊಂಡ ಬಳಿಕವಷ್ಟೆ ನೀರು ಹೊರಗೆ ಬಿಡಬೇಕು. ಆದರೆ ಇಲ್ಲಿ ವ್ಯತಿರಿಕ್ತವಾಗಿ ನಡೆಯುತ್ತಿದ್ದು, ಕರಾವಳಿ ಬೈಪಾಸ್‌ನಿಂದ ನಿಟ್ಟೂರು ಶುದ್ಧೀಕರಣ ಘಟಕಕ್ಕೆ ಅಳವಡಿಸಲಾದ ಪೈಪ್‌ನಲ್ಲಿ ಒಳಚರಂಡಿ ಕೊಳಚೆ ನಿಟ್ಟೂರಿಗೆ ತಲುಪುವ ಮೊದಲೇ ಮ್ಯಾನ್‌ಹೋಲ್‌ಗಳಿಂದ ಸೋರಿಕೆಯಾಗಿ ತೋಡು ಸೇರುತ್ತಿದೆ. ತೋಡಿನ ಮೂಲಕ ಒಳಚರಂಡಿ ನೀರು ಉಡುಪಿಯಿಂದ ಮಲ್ಪೆಯ ಸಮುದ್ರ ಪರಿಸರಕ್ಕೂ ಹರಿಯುತ್ತಿದೆ. ನಗರದ ಮ್ಯಾನ್‌ಹೋಲ್‌ಗಳು ಹಳೆಯದಾಗಿದ್ದು, ಈ ಬಗ್ಗೆ ಸಮಗ್ರ ಸಮೀಕ್ಷೆ ನಡೆದ ಬಳಿಕ ಡಿಪಿಆರ್ ಸಿದ್ದಗೊಳಿಸಿ ಡ್ರೈನೇಜ್ ನೀರಿನೊಂದಿಗೆ ಮಳೆ ನೀರು ಸೇರದಂತೆ ಕ್ರಮ ವಹಿಸಲಾಗುತ್ತದೆ. ಎಡಿಬಿ ಅನುದಾನ ಮೂಲಕ ಎಲ್ಲ ವಾರ್ಡ್‌ಗಳ ಮ್ಯಾನ್‌ಹೋಲ್‌ಗಳನ್ನು ವ್ಯವಸ್ಥಿತವಾಗಿ ದುರಸ್ತಿಪಡಿಸಲಾಗುವುದು. ಪ್ರಸ್ತುತ ಇಟ್ಟಿಗೆಗಳಿಂದ ನಿರ್ಮಾಣವಾಗಿರುವ ಮ್ಯಾನ್‌ಹೋಲ್‌ಗಳನ್ನು ತೆಗೆದು ಮುಂದೆ ಆರ್‌ಸಿಸಿಯಿಂದ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ.
ತ್ಯಾಜ್ಯ ನೀರು ಬಿಟ್ಟರೆ ನೋಟಿಸ್: ಇಂದ್ರಾಣಿ ನದಿಯಲ್ಲಿ ದ್ರವ ಮತ್ತು ಒಳಚರಂಡಿ ನೀರು ಹೊರ ಹಾಕಲಾಗುತ್ತಿರುವವರ ಬಗ್ಗೆ ನಗರಸಭೆ ಅಧಿಕಾರಿಗಳು ತಂಡ, ತಂಡವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತಿದ್ದಾರೆ. ತ್ಯಾಜ್ಯ ನೀರನ್ನು ನದಿಗಳಿಗೆ ಬಿಡುವುದು ಕಂಡುಬಂದರೆ ನೋಟಿಸ್ ನೀಡಿ ಕ್ರಮ ಜರುಗಿಸುವ ಕೆಲಸ ನಗರಸಭೆಯಿಂದ ನಡೆಯಲಿದೆ.
9 ಕಿ.ಮೀ ಹರಿಯುವ ಇಂದ್ರಾಳಿ: ಇಂದ್ರಾಣಿ ನದಿ ಇಂದ್ರಾಳಿಯ ಶ್ರೀ ಪಂಚದುರ್ಗಾಪರಮೇಶ್ವರಿ ದೇವಾಲಯದ ಪಕ್ಕದ ಕಾಡಿನಲ್ಲಿ ಸಣ್ಣ ಝರಿಯಾಗಿ ಆರಂಭಗೊಂಡು ಮುಂದೆ ಹೊಳೆಯ ರೂಪ ಪಡೆದು ಸಮುದ್ರ ಸೇರುತ್ತದೆ. ಇಂದ್ರಾಣಿ ನದಿ ಉದ್ದ 9 ಕಿ.ಮೀ. ಇದ್ದು, ನದಿ ಆಸುಪಾಸು 1 ಸಾವಿರ ಮನೆಗಳಿವೆ. ಈ ನದಿ ಹರಿಯುವ ಪರಿಸರದಲ್ಲಿ 500ಕ್ಕೂ ಅಧಿಕ ಬಾವಿಗಳಿದ್ದು, ನದಿಗೆ ತ್ಯಾಜ್ಯ ನೀರು ಸೇರಿದ ಬಳಿಕ ಬಹುತೇಕ ಬಾವಿಗಳು ಕಲುಷಿತಗೊಂಡಿವೆ.
ನದಿಗಳಿಗೆ ಕಲುಷಿತ ನೀರು ಬಿಡುವುದು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಂದ್ರಾಣಿ ನದಿಯ ಸ್ವಚ್ಛತೆಗೆ ಟೆಂಡರ್ ಕರೆಯಲಾಗಿದೆ. ನಗರದ ಒಳಚರಂಡಿ ವ್ಯವಸ್ಥೆಯನ್ನು ಸರ್ವೇ ಮಾಡಿಸಿ ವ್ಯವಸ್ಥಿತವಾಗಿ ರೂಪಿಸಲಾಗುವುದು.
-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ
ನಗರದ ಸಮಗ್ರ ಅಭಿವೃದ್ಧಿ ಆದ್ಯತೆ ಮೇರೆಗೆ ಇಂದ್ರಾಣಿ ನದಿ ಸ್ವಚ್ಛತೆ ಪ್ರಮುಖ ವಿಚಾರವಾಗಿದೆ. ಈ ಬಗ್ಗೆ ವಿಶೇಷ ಯೋಜನೆ ರೂಪಿಸಲಾಗುತ್ತಿದೆ. ನಗರದ ಮ್ಯಾನ್‌ಹೋಲ್‌ಗಳ ಆರ್‌ಸಿಸಿ ಮೂಲಕ ನಿರ್ಮಿಸಲಾಗುವುದು. ಇದಕ್ಕಾಗಿ ಎಡಿಬಿ ಅನುದಾನ ಬಳಸಿಕೊಳ್ಳಲಾಗುವುದು.
-ಆನಂದ್ ಸಿ.ಕಲ್ಲೋಳಿಕರ್, ಪೌರಾಯುಕ್ತ, ಉಡುಪಿ, ನಗರಸಭೆ