ಜಿಲ್ಲೆ

ರೈಲು ನಿಲ್ದಾಣದಲ್ಲಿ ಸೂಕ್ತ ತಂಗುದಾಣ ವ್ಯವಸ್ಥೆಗೆ ಶಾಸಕರ ಸೂಚನೆ

ಉಡುಪಿ: ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಸೂಕ್ತ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಶಾಸಕ ಯಶ್ ಪಾಲ್ ಸುವರ್ಣ ಸೂಚಿಸಿದರು.

ಮಂಗಳವಾರ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೂಕ್ತ ತಂಗುದಾಣ ವ್ಯವಸ್ಥೆ, ಹಳಿ ದಾಟುವ ಓವರ್ ಪಾಸ್ ಸೇತುವೆ ಮೇಲ್ಛಾವಣಿ ದುರಸ್ತಿ, ಸಮರ್ಪಕ ದಾರಿ ದೀಪ ವ್ಯವಸ್ಥೆ, ಪ್ರಯಾಣಿಕರಿಗೆ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ರೈಲ್ವೇ ನಿಲ್ದಾಣದ ಹೊರಾಂಗಣ ಹಾಗೂ ಇಂದ್ರಾಳಿ ರೈಲ್ವೆ ನಿಲ್ದಾಣದ ಸಂಪರ್ಕ ರಸ್ತೆಯ ಇಕ್ಕೆಲಗಳ
ಸ್ವಚ್ಛತೆ ನಿಟ್ಟಿನಲ್ಲಿ  ತಕ್ಷಣ ಕ್ರಮ ಕೈಗೊಳ್ಳುವಂತೆ ನಗರ ಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರೊಂದಿಗೆ ಶೀಘ್ರದಲ್ಲಿಯೇ ರೈಲ್ವೇ ಸಚಿವರನ್ನು ಭೇಟಿಯಾಗಿ ಇಂದ್ರಾಳಿ ನಿಲ್ದಾಣದ ಅಭಿವೃದ್ಧಿ ಬಗ್ಗೆ ಮನವಿ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ರೈಲೈ ನಿಲ್ದಾಣದ ಸಹಾಯಕ ಪ್ರಬಂಧಕ ಜಿ. ಡಿ. ಮೀನಾ, ಸಾರ್ವಜನಿಕ ಸಂಪರ್ಕ ಅಧಿಕಾರಿ  ಸುಧಾ ಕೃಷ್ಣಮೂರ್ತಿ, ಪೌರಾಯುಕ್ತ ರಾಯಪ್ಪ, ನಗರಸಭಾ ಸದಸ್ಯರಾದ ಅಶೋಕ್ ನಾಯ್ಕ್, ಪ್ರಭಾಕರ ಪೂಜಾರಿ, ಗಿರೀಶ್ ಅಂಚನ್, ರಾಜು, ಪ್ರಮುಖರಾದ ಅರವಿಂದ್ ಶೆಟ್ಟಿ ಉಪಸ್ಥಿತರಿದ್ದರು.