ವಿಜಯವಾಣಿ ಸುದ್ದಿಜಾಲ ಉಡುಪಿ
ರಾಷ್ಟ್ರೀಯ ಹೆದ್ದಾರಿ 169ಎ ಇಂದ್ರಾಳಿ ಬಳಿ ರ್ನಿಲಕ್ಯದೊಂದಿಗೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಅನೇಕ ಅಪಘಾತ ಸಂಭವಿಸಿ ಸಾವು-ನೋವು ಉಂಟಾಗುತ್ತಿದೆ. ಇದಕ್ಕೆ ಕಾರಣೀಕರ್ತರಾದ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚಿಸಿದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅವಧಿ ಮುಗಿದರೂ ಕಾಮಗಾರಿ ಮುಗಿಸದ್ದರಿಂದ ಆಕ್ರೋಶ ವ್ಯಕ್ತಪಡಿಸಿದರು.
ಮೇಲ್ಸೇತುವೆ ರಸ್ತೆ ಕಾಮಗಾರಿ ವಿಳಂಬದಿಂದಾಗಿ ಜನರು ಕಷ್ಟಪಡುತ್ತಿದ್ದಾರೆ. ರಸ್ತೆ ಇಕ್ಕಟ್ಟಾಗಿದ್ದು ಎರಡು ವರ್ಷದಿಂದ ದಿನವೂ ಮಾರಣಾಂತಿಕ ಅಪಘಾತ ಸಂಭವಿಸುತ್ತಿದೆ. ಇದಕ್ಕೆಲ್ಲ ಕಾಮಗಾರಿ ನಡೆಸುತ್ತಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣವಾಗಿದೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದರು.
ನಿಮ್ಮ ಕಾಮಗಾರಿಯ ವಿಳಂಬದಿಂದಾಗಿ 2023ರಲ್ಲಿ 8 ಅಪಘಾತ ಸಂಭವಿಸಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. 2024ರಲ್ಲಿ ಈವರೆಗೆ 10 ಅಪಘಾತ ಪ್ರಕರಣ ಸಂಭವಿಸಿದ್ದು ಇಬ್ಬರು ಮೃತಪಟ್ಟಿದ್ದಾರೆ. 10ಕ್ಕೂ ಹೆಚ್ಚು ಜನ ತೀವ್ರ ಗಾಯಗೊಂಡಿದ್ದಾರೆ. ಇನ್ನು ನಿಮ್ಮ ನಿರ್ಲಕ್ಷ್ಯ ಸಹಿಸಲಾಗದು. ಗುತ್ತಿಗೆದಾರರು, ಸಂಬಂಧಪಟ್ಟ ರೈಲ್ವೆ ಹಾಗೂ ಎನ್ಎಚ್ ಇಂಜಿನಿಯರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವಾಲಯಕ್ಕೆ ಪತ್ರ ಬರೆಯುತ್ತೇನೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್., ಕೊಂಕಣ ರೈಲ್ವೆಯ ಹಿರಿಯ ಇಂಜಿನಿಯರ್ ಗೋಕುಲ್ದಾಸ್, ಶೃಂಗೇರಿ-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಉಪಸ್ಥಿತರಿದ್ದರು.
ಸಭೆಯಲ್ಲಿ ಆಕ್ರೋಶಗೊಂಡಿದ್ದ ಡಿಸಿ ವಿದ್ಯಾಕುಮಾರಿ, 2018-19ರಲ್ಲಿಯೇ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ನಡೆಸಲು ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯ, ಸಮನ್ವಯದ ಕೊರತೆಯಿಂದಾಗಿ ಕಾಮಗಾರಿ ನಿಧಾನಗತಿ ಕಂಡಿದೆ. ಸಂಬಂಧಿತ ಇಂಜಿನಿಯರ್ ಏನು ಕೆಲಸ ಮಾಡುತ್ತಿದ್ದೀರಾ? ನಿಮಗೆ ಹೇಳುವವರು, ಕೇಳುವವರು ಯಾರೂ ಇಲ್ಲವೇ? ಅನೇಕ ಬಾರಿ ಸಭೆ ಕರೆದು ಸೂಚಿಸಿದ್ದರೂ ವಿಳಂಬ ಮಾಡುತ್ತೀರಿ ಅಂದರೆ ಏನು ಅರ್ಥ? ಮುಂದಿನ ನವೆಂಬರ್ 10ರ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಖಡಕ್ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠ ಡಾ. ಅರುಣಕುಮಾರ್ ಕೆ. ಮಾತನಾಡಿ, ನಿಮ್ಮ ವಿಳಂಬ ಖಂಡಿಸಿ ಅನೇಕ ಸಂಘ-ಸಂಸ್ಥೆಗಳು, ಸಾರ್ವನಿಕರು ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತವೇ ಉತ್ತರ ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸದಿರುವುದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಅಸಂಬದ್ಧ ಕಾಮಗಾರಿಯಿಂದ ಇಂದ್ರಾಳಿ ರಸ್ತೆಯಲ್ಲಿ ಅಪಘಾತ ಆಗುತ್ತಿದೆ. ಅಲ್ಲಿ ನಿಮ್ಮ ಕುಟುಂಬದವರಿಗೆ ಅಪಘಾತ ಆಗಿದ್ದರೆ ನೀವು ಸಹಿಸುತ್ತಿದ್ದೀರೇ? ಕಾಮಗಾರಿ ವಿಳಂಬಕ್ಕೆ ಪ್ರತಿ ಸಭೆಯಲ್ಲೂ ನೆಪ ಹೇಳುವುದು ಸರಿಯಲ್ಲ. ಇತ್ತೀಚೆಗೆ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಗುತ್ತಿಗೆದಾರರು, ರಾಷ್ಟ್ರೀಯ ಹೆದ್ದಾರಿ ಇಂನಿಯರ್ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳನ್ನೇ ಅಪರಾಧಿಗಳನ್ನಾಗಿ ಮಾಡಲಾಗುವುದು. ಅಲ್ಲದೆ, ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತೇನೆ ಎಂದರು.
ವೆಲ್ಡಿಂಗ್ ಕಾಮಗಾರಿಯ ಜತೆಯಲ್ಲಿಯೇ ರೈಲ್ವೆ ಹಳಿಯ ಮೇಲೆ ಗರ್ಡಲ್ಸ್ ನಿರ್ಮಿಸುವುದನ್ನು ತಪಾಸಣೆ ಮಾಡಬೇಕು. ಬೇರಿಂಗ್ ಅಳವಡಿಸಿ ಚಾಲನೆ ಮಾಡುವಾಗ ಆ ಸಮಯದಲ್ಲಿ ರೈಲು ಸಂಚಾರ ತಡೆಯುವುದು, ಅದಕ್ಕೆ ಒಪ್ಪಿಗೆ ಪಡೆಯುವುದನ್ನೂ ಸಹ ಏಕಕಾಲದಲ್ಲಿಯೇ ಮಾಡಬೇಕು.| ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ