(ಡಾ. ಆರ್.ಸೆಲ್ವಮಣಿ) 
ಜಿಲ್ಲೆ

ಸೆ.11ರಿಂದ ‘ಇಂದ್ರಧನುಷ್’ ಮಿಷನ್ 2.0

Shivamogga - Desk - Vinayakumar D B

ಶಿವಮೊಗ್ಗ: ಸಾರ್ವತ್ರಿಕ ಲಸಿಕೆ ಪಡೆಯುವಲ್ಲಿ ವಂಚಿತರಾಗಿರುವ, ಕೈಬಿಟ್ಟು ಹೋಗಿರುವ ಗರ್ಭಿಣಿಯರು ಮತ್ತು ಮಕ್ಕಳನ್ನು ಗುರುತಿಸಿ 2ನೇ ಸುತ್ತಿನ ಇಂದ್ರಧನುಷ್ ಲಸಿಕಾ ಅಭಿಯಾನದಲ್ಲಿ ಲಸಿಕೆ ಹಾಕಬೇಕೆಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ 2ನೇ ಸುತ್ತಿನ ಮಿಷನ್ ಇಂದ್ರಧನುಷ್ 5.0(ಐಎಂಐ 5.0) ಮತ್ತು ಯು-ವಿನ್ ಪೋರ್ಟಲ್(ಖಿಐಘೆ) ಕುರಿತು ಜಿಲ್ಲಾ ಚಾಲನಾ ಸಮಿತಿ ಸಭೆ ನಡೆಸಿದ ಅವರು, ವೈದ್ಯಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು ಹಾಗೂ ಇತರೆ ಸಂಬಂಧಿಸಿದ ಇಲಾಖೆಗಳು ಲಸಿಕೆಯಿಂದ ವಂಚಿತರಾದ, ಬಿಟ್ಟು ಹೋಗಿರುವ ಪ್ರದೇಶಗಳು, ಅಪಾಯದಲ್ಲಿರುವ ಪ್ರದೇಶ ಹಾಗೂ ಸಮುದಾಯಗಳನ್ನು ಗುರುತಿಸಿ ಲಸಿಕೆ ನೀಡಬೇಕು. 2ನೇ ತೀವ್ರತರ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಕವರೇಜ್ ಆಗಬೇಕು ಎಂದರು.
ಜಿಲ್ಲೆಯಾದ್ಯಂತ ಮನೆಗಳು, ತಲಾವಾರು ಸರ್ವೇ ಸಮರ್ಪಕವಾಗಿ ಆಗಬೇಕು. ಮುಖ್ಯವಾಗಿ ನಗರ ಪ್ರದೇಶದ ಬಳಿ ಇರುವ ಸ್ಲಂ, ಅಲೆಮಾರಿ ತಾಣಗಳು, ವಲಸಿಗರ ತಾಣ, ಇಟ್ಟಿಗೆ ಭಟ್ಟಿಗಳು ಇತರೆ ಪ್ರದೇಶಗಳಲ್ಲಿ ಸರ್ವೇಯನ್ನು ಪರಿಣಾಮಕಾರಿಯಾಗಿ ನಡೆಸಿ, ಲಸಿಕೆಯಿಂದ ಬಿಟ್ಟು ಹೋದವರಿಗೆ ಲಸಿಕೆ ನೀಡಬೇಕು. ಮೀಸಲ್ಸ್-ರುಬೆಲ್ಲಾ ನಿರ್ಮೂಲನೆ ಕುರಿತು ಸಮರ್ಪಕ ಕ್ರಮ ವಹಿಸಬೇಕು. ಆರ್‌ಸಿಎಚ್‌ಓ ಅವರು ತಾಲೂಕು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದರು.
ಡಬ್ಲ್ಯುಎಚ್‌ಓ ಕನ್ಸಲ್ಟೆಂಟ್ ಡಾ. ಅನಂತೇಶ್ ಬಾರ್ಕರ್ ಮಾತನಾಡಿ, 2ನೇ ಸುತ್ತಿನ ತೀವ್ರತರ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನ ಸೆ.11ರಿಂದ 16ರವರೆಗೆ ನಡೆಯಲಿದೆ. ಮೀಸಲ್ಸ್-ರುಬೆಲ್ಲಾ ಪ್ರಕರಣ ಪತ್ತೆ ಹಚ್ಚಲು ಎಲ್ಲ ತಾಲೂಕುಗಳಲ್ಲಿ ಜ್ವರ-ದದ್ದು ಪ್ರಕರಣಗಳ ಮಾದರಿಗಳನ್ನು ಸಕಾಲಿಕವಾಗಿ ಪರೀಕ್ಷೆಗೆ ಕಳುಹಿಸಬೇಕು. ಎಲ್ಲ ತಾಲೂಕುಗಳಲ್ಲಿ ಎಂಆರ್ ನಿರ್ಮೂಲನೆ ಪ್ರಗತಿ ಸಾಧಿಸಬೇಕು ಎಂದರು.
ಆರ್‌ಸಿಎಚ್ ಅಧಿಕಾರಿ ಡಾ. ನಾಗರಾಜ್ ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮದ ಮೊದಲನೇ ಸುತ್ತಿನಲ್ಲಿ 5 ವರ್ಷದ ಒಳಗಿನ 2,997 ಮಕ್ಕಳಿಗೆ ಅಂದರೆ ಶೇ.115 ಮತ್ತು 630 ಗರ್ಭಿಣಿಯರಿಗೆ ಲಸಿಕೆ ನೀಡಿ ಶೇ111.90 ಗುರಿ ಸಾಧಿಸಲಾಗಿದೆ. ಮೀಸಲ್ಸ್ ರುಬೆಲ್ಲಾ ನಿರ್ಮೂಲನೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಯಾರೇ ಆಗಲಿ ಜ್ವರ ಮತ್ತು ದದ್ದು ಕಂಡುಬಂದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮೆಡಿಕಲ್ ಕಾಲೇಜು ಅಥವಾ ಆಸ್ಪತ್ರೆಗಳಿಗೆ 5 ವರ್ಷದೊಳಗಿನ ಮಕ್ಕಳು ಬಂದಾಗ ಅವರ ದಡಾರ ಚುಚ್ಚುಮದ್ದು ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಜನಿಸುವ ಪ್ರತಿ ಮಕ್ಕಳನ್ನು ಯು-ವಿನ್ ಪೋರ್ಟಲ್ನಲ್ಲಿ ನೋಂದಾಯಿಸಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗುವುದು. ಸಾರ್ವತ್ರಿಕ ಲಸಿಕಾಕರಣ ಪೋರ್ಟಲ್ನಲ್ಲಿ ಅಪ್‌ಡೇಟ್ ಆಗುತ್ತಿದೆ. ಶೇ.100 ಲಸಿಕಾಕರಣ ಸಾಧಿಸಲು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು, ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪ್ರಾರ್ಥನೆ ವೇಳೆ ಮಕ್ಕಳಿಗೆ ಮಾಹಿತಿ ನೀಡಿ
ಶಿಕ್ಷಣ ಇಲಾಖೆಯಿಂದ ಪ್ರತಿದಿನ ಮಕ್ಕಳ ಪ್ರಾರ್ಥನೆ ವೇಳೆಯಲ್ಲಿ ಲಸಿಕೆ ಕುರಿತು ಮಾಹಿತಿ ನೀಡಬೇಕು. ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ತಿಳಿಸಬೇಕು. ಹುಷಾರಿಲ್ಲದೆ ಗೈರಾದ ಮಕ್ಕಳ ಮಾಹಿತಿ ಪಡೆದು ಜ್ವರ ಮತ್ತು ದದ್ದು(ರ‌್ಯಾಶಸ್) ಇದ್ದಲ್ಲಿ ಹತ್ತಿರದ ವೈದ್ಯರ ಬಳಿ ಪರೀಕ್ಷಿಸುವಂತೆ ತಿಳಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಹ ಅಂಗನವಾಡಿಗಳಲ್ಲಿ ಈ ಕೆಲಸ ಆಗಬೇಕು ಎಂದು ಡಾ. ಆರ್.ಸೆಲ್ವಮಣಿ ಹೇಳಿದರು.