ಸೊರಬ ಸರ್ಕಾರಿ ಆಸ್ಪತ್ರೆಯಲ್ಲಿ ಇಂದ್ರಧನುಷ್ 5.0 ಅಭಿಯಾನಕ್ಕೆ ತಹಸೀಲ್ದಾರ್ ಹುಸೇನ್ ಸರ್ಕಾವಸ್ ಚಾಲನೆ ನೀಡಿದರು. ಡಾ. ಪ್ರಭು ಸಾಹುಕಾರ್, ಎಂ.ಡಿ.ಉಮೇಶ್, ಡಾ. ಆಕಾಶ್ ಇತರರಿದ್ದರು. 
ಜಿಲ್ಲೆ

ಇಂದ್ರಧನುಷ್ ಲಸಿಕಾ ಅಭಿಯಾನ: ಸರ್ಕಾರದ ಮಹತ್ವದ ಹೆಜ್ಜೆ

ಸೊರಬ: ಕಾರಣಾಂತರಗಳಿಂದ ಲಸಿಕೆ ಪಡೆಯದೆ ವಂಚಿತರಾದ ಲಾನುಭವಿಗಳಿಗೆ ವಿಶೇಷ ಆದ್ಯತೆಯಲ್ಲಿ ಲಸಿಕೆ ನೀಡುವ ಸರ್ಕಾರದ ಮಹತ್ವದ ಹೆಜ್ಜೆಯೇ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನ ಎಂದು ಟಿಎಚ್‌ಒ ಡಾ. ಪ್ರಭು ಸಾಹುಕಾರ್ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ತಾಲೂಕು ಅಡಳಿತ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಿಂದ ಏರ್ಪಡಿಸಿದ್ದ ಇಂದ್ರಧನುಷ್ 5.0 ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳು ಮತ್ತು ಗರ್ಭಿಣಿಯರಿಗೆ ಆದ್ಯತೆ ಮೇಲೆ ಲಸಿಕೆ ನೀಡಲಾಗುವುದು. ಬಾಲಕ್ಷಯ, ಧನುರ್ವಾಯು, ಗಂಟಲು ಮಾರಿ, ಪೋಲಿಯೋ, ದಡಾರ, ರುಬೆಲ್ಲಾ ಹೀಗೆ ವಿವಿಧ ರೋಗಗಳ ವಿರುದ್ಧ ಲಸಿಕೆ ನೀಡುವ ಸಾರ್ವತ್ರಿಕ ಅಭಿಯಾನ ಇದಾಗಿದೆ. ಈ ಮೂಲಕ ಸಂಪೂರ್ಣ ರೋಗ ನಿರೋಧಕ ಶಕ್ತಿ ಪಡೆದ ಮಗುವನ್ನು ಸಮಾಜಕ್ಕೆ ನೀಡುವುದು ನಮ್ಮ ಗುರಿ ಎಂದು ವಿವರಿಸಿದರು.
ತಹಸೀಲ್ದಾರ್ ಹುಸೇನ್ ಸರ್ಕಾವಸ್ ಮಾತನಾಡಿ, ಮಕ್ಕಳ ಮತ್ತು ತಾಯಿ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಈ ಲಸಿಕಾ ಅಭಿಯಾನ ನಡೆಸುತ್ತಿದೆ ಎಂದರು.
ಪುರಸಭೆ ಸದಸ್ಯ ಎಂ.ಡಿ.ಉಮೇಶ್, ಮಕ್ಕಳ ತಜ್ಞ ಡಾ. ಆಕಾಶ್ ಇತರರಿದ್ದರು.