ಜಿಲ್ಲೆ

ದಸರಾ ಪ್ರಯುಕ್ತ ಪತ್ರಕರ್ತರಿಗೆ ಒಳಾಂಗಣ ಕ್ರೀಡಾಕೂಟ

ಮಡಿಕೇರಿ: ದಸರಾ ಪ್ರಯುಕ್ತ ಮಡಿಕೇರಿ ದಸರಾ ಕ್ರೀಡಾ ಸಮಿತಿ ಮತ್ತು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಹಯೋಗದಲ್ಲಿ ಪತ್ರಿಕಾಭವನದಲ್ಲಿ ಪತ್ರಕರ್ತರಿಗೆ ಒಳಾಂಗಣ ಕ್ರೀಡಾಕೂಟವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ, ದಸರಾ ಆರಂಭದಿಂದಲೂ ಸಮಿತಿ ವತಿಯಿಂದ ಹತ್ತಾರು ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಳೆಯ ನಡುವೆಯೂ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. ಪ್ರತಿಕುಲ ಹವಾಮಾನದ ಕಾರಣದಿಂದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟವನ್ನು ಅ.೧೨ಕ್ಕೆ ಮುಂದೂಡಲಾಗಿದೆ. ಪ್ರಥಮ ಸ್ಥಾನ ಪಡೆದ ತಂಡಕ್ಕೆ ೧,೦೦,೦೦೧ ರೂ. ನಗದು, ದ್ವಿತೀಯ ೫೦,೦೦೧ ರೂ., ತೃತೀಯ ೨೫,೦೦೧ ರೂ. ಬಹುಮಾನ ನೀಡಲಾಗುವುದು. ಮಹಿಳಾ ವಿಭಾಗದಲ್ಲಿ ವಿಜೇತ ತಂಡಕ್ಕೆ ಪ್ರಥಮ ೧೦,೦೦೧ ರೂ., ದ್ವಿತೀಯ ೫೦೦೧ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ಸದಾ ವೃತ್ತಿಯ ಜಂಜಾಟದಲ್ಲಿರುವ ಪತ್ರಕರ್ತರಿಗೆ ಕ್ರೀಡಾಕೂಟಗಳು ಮನೋಲ್ಲಾಸ ನೀಡುತ್ತದೆ. ಇದರಿಂದ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದಾಗಿದೆ. ಪತ್ರಕರ್ತರು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕೆಂದು ಹೇಳಿದರು.

ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕ್ರೀಡಾಕೂಟಗಳನ್ನು ಆಯೋಜಿಸಿ ಮಡಿಕೇರಿ ದಸರಾವನ್ನು ಕ್ರೀಡಾ ಸಮಿತಿ ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಪ್ರದೀಪ್ ಕರ್ಕೆರ ನೇತೃತ್ವದ ತಂಡ ಯಶಸ್ವಿಯಾಗಿ ಪಂದ್ಯಾವಳಿ ನಡೆಸಿ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಹಿಸುವ ಕೆಲಸ ಮಾಡಿದೆ. ಪತ್ರಕರ್ತರಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರುವುದರಿಂದ ಪತ್ರಕರ್ತರಿಗೂ ವೇದಿಕೆ ದೊರೆತಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ದಸರಾ ಕ್ರೀಡಾ ಸಮಿತಿ ಉಪಾಧ್ಯಕ್ಷ ಮಡ್ಲಂಡ ಪೆಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಕಪಿಲ್ ದುಗ್ಗಳ, ಸಹ ಕಾರ್ಯದರ್ಶಿ ನಿರಂಜನ್, ಸಹ ಖಜಾಂಜಿ ಬಲ್ಯದ ಯೇಣುಕುಮಾರ್, ಸದಸ್ಯರಾದ ಪ್ರದೀಪ್ ಮರಗೋಡು, ಇಮ್ರಾನ್, ಜಿ.ಆರ್.ಸುದರ್ಶನ್, ಕೊಡಗು ಪ್ರೆಸ್ ಕ್ಲಬ್ ಕಾರ್ಯದರ್ಶಿ ಅದರ್ಶ್, ಸಂಚಾಲಕ ಮಂಜು ಸುವರ್ಣ ಸೇರಿದಂತೆ ಪತ್ರಕರ್ತರು ಮತ್ತು ದಸರಾ ಕ್ರೀಡಾ ಸಮಿತಿ ಸದಸ್ಯರಿದ್ದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನಿದೇರ್ಶಕರಾದ ಗೋಪಾಲ್ ಸೋಮಯ್ಯ ಸ್ವಾಗತಿಸಿದರೆ, ಎಚ್.ಜೆ.ರಾಕೇಶ್ ನಿರೂಪಿಸಿ, ವಂದಿಸಿದರು.

ವಿಜೇತರ ವಿವರ: ಟಿಟಿ ಸಿಂಗಲ್ಸ್ ವಿಭಾಗದಲ್ಲಿ ಮಂಜು ಸುವರ್ಣ ಪ್ರಥಮ, ಗಣೇಶ್ ಕಾಫಿ ಲ್ಯಾಂಡ್ ದ್ವಿತೀಯ ಸ್ಥಾನ ಪಡೆದರೆ, ಟಿಟಿ ಡಬಲ್ಸ್ ವಿಭಾಗದಲ್ಲಿ ಮಂಜು ಸುವರ್ಣ ಮತ್ತು ಆದರ್ಶ್(ಪ್ರ), ಗೋಪಾಲ್ ಸೋಮಯ್ಯ ಮತ್ತು ಲೋಹಿತ್ ಮಾಗುಲು ಮನೆ ದ್ವಿತೀಯ ಸ್ಥಾನ ಪಡೆದರು.

ಕೇರಂ ಸಿಂಗಲ್ಸ್ ವಿಭಾಗದಲ್ಲಿ ಕೆ.ಎಂ.ವಿನೋದ್(ಪ್ರ), ದಿವಾಕರ್ ಜಾಕಿ ದ್ವಿತೀಯ ಸ್ಥಾನ ಪಡೆದರು. ಕೇರಂ ಡಬಲ್ಸ್ ವಿಭಾಗದಲ್ಲಿ ಗೋಪಾಲ್ ಸೋಮಯ್ಯ ಮತ್ತು ವಿಶ್ವ ಕುಂಬೂರು ಪ್ರಥಮ ಸ್ಥಾನ ಪಡೆದರೆ, ಮಂಜು ಸುವರ್ಣ ಮತ್ತು ಆದರ್ಶ್ ದ್ವಿತೀಯ ಸ್ಥಾನ ಪಡೆದರು. ಚೆಸ್‌ನಲ್ಲಿ ಅನಂದ್ ಕೊಡಗು ಪ್ರಥಮ ಸ್ಥಾನ ಪಡೆದರೆ, ವರುಣ್ ದ್ವಿತೀಯ ಸ್ಥಾನ ಪಡೆದರು.