ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಇಂದಿರಾಗಾಂಧಿ ಜನ್ಮದಿನಾಚರಣೆಯಲ್ಲಿ ಹಿರಿಯ ಕಾಂಗ್ರೆಸಿಗರಾದ ಶಕುಂತಲಾ ಚಂದ್ರಶೇಖರ್, ವನಮಾಲಮ್ಮ, ಆರ್.ಸತ್ಯನಾರಾಯಣ್, ಷಣ್ಮುಖಪ್ಪ ಗೌಡ್ರು, ಸಂಜೀವಪ್ಪ, ರಾಮಣ್ಣ, ವಾಸಣ್ಣ, ಅನಂತನಾರಾಯಣ್ ಅವರನ್ನು ಸನ್ಮಾನಿಸಲಾಯಿತು. ಆರ್.ಪ್ರಸನ್ನಕುಮಾರ್, ಎಚ್.ಎಂ.ಚಂದ್ರಶೇಖರಪ್ಪ, ಆಯನೂರು ಮಂಜುನಾಥ್, ಎನ್.ರಮೇಶ್, ಎಸ್.ರವಿಕುಮಾರ್ ಮುಂತಾದವರಿದ್ದರು.  
ಜಿಲ್ಲೆ

ಇಂದಿರಾ ಗಾಂಧಿ ಸಾಧನೆ ಇಂದಿಗೂ ಪ್ರಸ್ತುತ

ಶಿವಮೊಗ್ಗ: ಇವತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಜೀವಂತವಾಗಿದೆ ಎಂದರೆ ಅದಕ್ಕೆ ಇಂದಿರಾ ಗಾಂಧಿ ಬಹುಮುಖ್ಯ ಕಾರಣ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಅಭಿಪ್ರಾಯಪಟ್ಟರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಇಂದಿರಾ ಗಾಂಧಿ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದ ಸಂದರ್ಭದಲ್ಲಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಕರ್ನಾಟಕ. ಅವರು ಚಿಕ್ಕಮಗಳೂರಿನಿಂದ ಚುನಾವಣೆಗೆ ಸ್ಪರ್ಧಿಸಿದಾಗ ಶಿವಮೊಗ್ಗದಿಂದ ಅನೇಕ ಮುಖಂಡರು ಪ್ರಚಾರಕ್ಕೆ ತೆರಳಿದ್ದರು ಎಂದು ಹೇಳಿದರು.

ಇಂದಿರಾ ಗಾಂಧಿ ಈ ದೇಶದ ಹೆಮ್ಮೆಯ ಮಹಿಳೆ. ಅವರು ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡದಿದ್ದರೆ ಇಂದು ಬಡವರು ಬ್ಯಾಂಕ್ ಮೆಟ್ಟಿಲು ಹತ್ತಲು ಸಾಧ್ಯವಾಗುತ್ತಿರಲಿಲ್ಲ. ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಅವರು ತಮ್ಮ ಜೀವನ ಮುಡಿಪಾಗಿಟ್ಟಿದ್ದರು ಎಂದು ಸ್ಮರಿಸಿದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ದೇಶಕ್ಕೆ ಕಷ್ಟ ಬಂದ ಕಾಲದಲ್ಲಿ ಇಂದಿರಾಗಾಂಧಿ ದೇಶದ ಕೈಹಿಡಿದರು. ಸುಮಾರು 15 ವರ್ಷ ಆಡಳಿತ ನಡೆಸಿದ ಅವರು ಭಾರತದ ಮೊದಲ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬಿಗಿಯಾದ ಆಡಳಿತದಿಂದ ಉಕ್ಕಿನ ಮಹಿಳೆ ಎಂಬ ಹೆಸರು ಪಡೆದರು ಎಂದು ಬಣ್ಣಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಮಾತನಾಡಿ, ಇಂದಿರಾಗಾಂಧಿ 20 ಅಂಶದ ಕಾರ್ಯಕ್ರಮಗಳ ಮೂಲಕ ದೇಶದ ಗಮನ ಸೆಳೆದವರು. ಇಂದು ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಇಂದಿರಾ ಗಾಂಧಿ ನೀಡಿದ ಆಡಳಿತದ ತಳಹದಿಯ ಮೇಲೇ ಕಾರ್ಯನಿರ್ವಹಿಸುತ್ತವೆ ಎಂದರು.

ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಪಾಲಿಕೆ ಮಾಜಿ ಸದಸ್ಯೆ ವಿಜಯಲಕ್ಷ್ಮೀ ಪಾಟೀಲ್, ಪ್ರಮುಖರಾದ ಎಸ್.ಟಿ.ಹಾಲಪ್ಪ, ಇಸ್ಮಾಯಿಲ್ ಖಾನ್, ವೈ.ಎಚ್.ನಾಗರಾಜ್, ಕಲೀಂ ಪಾಶ, ಚಂದ್ರಭೂಪಾಲ, ಇಕ್ಕೇರಿ ರಮೇಶ್, ಎಸ್.ಪಿ.ಶೇಷಾದ್ರಿ, ಕವಿತಾ, ಅರ್ಚನಾ ಮುಂತಾದವರಿದ್ದರು.