ಜಿಲ್ಲೆ

ಜಗತ್ತಿನ ದಿಟ್ಟ ಮಹಿಳೆ ಇಂದಿರಾ ಗಾಂಧಿ

ಮಡಿಕೇರಿ: ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಭಾರತದ ಉಕ್ಕಿನ ಮಹಿಳೆ ಮಾತ್ರ ಆಗಿರಲಿಲ್ಲ. ಜಗತ್ತಿನ ಅತ್ಯಂತ ದಿಟ್ಟ ಮಹಿಳೆಯಾಗಿದ್ದರು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಹೇಳಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಶುಕ್ರವಾರ ಆಯೋಜಿಸಲಾದ ಇಂದಿರಾಗಾಂಧಿ ಸಂಸ್ಮರಣೆ ಹಾಗೂ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

೧೯೭೧ ರಲ್ಲಿ ಪಾಕಿಸ್ಥಾನದೊಂದಿಗೆ ಯುದ್ಧ ಹೂಡಿ ಬಾಂಗ್ಲಾ ವಿಮೋಚನೆ ಮೂಲಕ ೯೫ ಸಾವಿರ ಪಾಕ್ ಸೈನಿಕರ ಶರಣಾಗತಿಯೊಂದಿಗೆ ಭಾರತಕ್ಕೆ ಗೆಲುವು ದಾಖಲಿಸಲು ಇಂದಿರಾಗಾಂಧಿ ಯವರ ದಿಟ್ಟ ನಿರ್ಧಾರಗಳು ಕಾರಣ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಮಹಾತ್ಮ ಗಾಂಧಿಯವರ ಸಮಕಾಲೀನ ನಾಯಕರಾಗಿದ್ದ ಸರ್ದಾರ್ ವಲ್ಲಭಾಯಿ ಪಟೇಲ್ ರವರು ಭಾರತದ ಪ್ರಥಮ ಉಪ ಪ್ರಧಾನಿಯಾಗಿ, ಗೃಹ ಸಚಿವರಾಗಿ ಹರಿದು ಹೋಗಿದ್ದ ದೇಶವನ್ನು ಒಂದುಗೂಡಿಸಿ ಐಕೈತೆಯ ಸಾಧನೆ ಮಾಡಿದವರು. ಆಪರೇಶನ್ ಪೋಲೋ ಮೂಲಕ ಹೈದರಾಬಾದ್ ವಿಮೋಚನೆಯಾಗಿದ್ದು ಪಟೇಲರ ಕೊಡುಗೆಯಾಗಿದೆ. ದೇಶದ ಶಾಂತಿ ಸಮಗ್ರತೆಗೆ ಧಕ್ಕೆ ಯಾದಾಗ ೧೯೪೮ರ ಫೆಬ್ರವರಿ ೪ ರಂದು ಪಟೇಲರು ಆರ್.ಎಸ್.ಎಸ್ ಬ್ಯಾನ್ ಮಾಡಿದ್ದರು ಎಂದು ಸ್ಮರಿಸಿದ ತೆನ್ನಿರ ಮೈನಾ ಅವರು, ಇದನ್ನು ಮರೆಮಾಚಲು ಬಿಜೆಪಿಯವರು ಸರ್ದಾರ್ ಪಟೇಲರನ್ನು ಹೈಜಾಕ್ ಮಾಡಲು ಹೊರಟಿದ್ದಾರೆ ಎಂದು ಮೂದಲಿಸಿದರು.

ಇಂದಿರಾ ಗಾಂಧಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರು ಅಪ್ಪಟ ಕಾಂಗ್ರೆಸ್ಸಿಗರಾಗಿದ್ದು, ಮಹಾನ್ ವ್ಯಕ್ತಿಗಳ ಕೊರತೆಯಿಂದ ಬಳಲುತ್ತಿರುವ ಬಿಜೆಪಿ ಮುಂದಿನ ದಿನಗಳಲ್ಲಿ ರಾಜೀವ್ ಗಾಂಧಿ, ರಾಹುಲ್ ಗಾಂಧಿ ಜಪ ಮಾಡಿದರೂ ಅಚ್ಚರಿಯಿಲ್ಲ ಎಂದು ಟೀಕಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್ ರವರು ಇಂದಿರಾ ಗಾಂಧಿ ಹಾಗೂ ವಲ್ಲಭಾಯಿ ಪಟೇಲರ ಆದರ್ಶಗಳನ್ನು ಕಾರ್ಯಕರ್ತರು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.

ಮೂಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷರಾದ ಕಾನೆಹಿತ್ಲು ಮೊಣ್ಣಪ್ಪ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಕೆ.ಜಿ.ಪೀಟರ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ನಗರ ಸಭೆ ಮಾಜಿ ಅಧ್ಯಕ್ಷೆ ಜುಲೇಕಾಬಿ, ಪ್ರಮುಖರಾದ ಶ್ರೀಮತಿ ಶಶಿ, ಕಲೀಲ್ ಬಾಷ, ಪಿಯುಸ್ ಫರೇರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.