ಹುಬ್ಬಳ್ಳಿ: ದೇಶದಲ್ಲಿ ಅತ್ಯಂತ ಉತ್ತಮ ಆಡಳಿತ ನೀಡುವ ಮೂಲಕ ಆಂತರಿಕ ಹಾಗೂ ಬಾಹ್ಯ ಸುರಕ್ಷತೆಯನ್ನು ಗಟ್ಟಿಗೊಳಿಸಲಾಗಿದೆ. ಇದೇ ಕಾರಣಕ್ಕೆ ವಿಶ್ವದ ಅನೇಕ ರಾಷ್ಟ್ರಗಳು ಇಂದು ಭಾರತದ ನೇತೃತ್ವವನ್ನು ಬಯಸುತ್ತಿವೆ. ಆದರೆ, ಕೆಲವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ವಾಧಿಕಾರಿ ಎಂದು ಹೇಳುವುದು ಸರಿಯಲ್ಲ ಆರ್ ಎಸ್ ಎಸ್ ಜೇಷ್ಠ ಪ್ರಚಾರಕ ಸು. ರಾಮಣ್ಣ ಹೇಳಿದರು.
ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಬುಧವಾರ ನಗರದ ಸಿಟಿಜನ್ ಫಾರ್ ಸೊಷಿಯಲ್ ಜಸ್ಟಿಸ್ ವತಿಯಿಂದ ಏರ್ಪಡಿಸಿದ್ದ ತುರ್ತು ಪರಿಸ್ಥಿತಿ ಕರಾಳ ದಿನಗಳ ವಿರುದ್ಧ ನಡೆದಿರುವ ರೋಚಕ ಕಥೆ ಅನಾವರಣ ಹಾಗೂ ಮರುಮುದ್ರಿತ ಭುಗಿಲು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ರಾಷ್ಟ್ರದ ಪುನರ್ ನಿರ್ಮಾಣಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟಿರುವವರು ಮೋದಿ. ಅವರು ಯಾರ ವಿರುದ್ಧವೂ ಇದುವರೆಗೂ ಪ್ರತಿಕಾರದ ಕ್ರಮ ಕೈಗೊಂಡಿಲ್ಲ. ಶ್ರೇಷ್ಠ ವಿದೇಶಾಂಗ ನೀತಿಯನ್ನು ಅನುಸರಿಸುವ ಮೂಲಕ ಯಾವ ಕಾಲಕ್ಕೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಂಡಿದ್ದಾರೆ. ಅಂಥವರ ಬಗ್ಗೆ ಅನಗತ್ಯವಾಗಿ ಮಾತನಾಡಲಾಗುತ್ತಿದೆ ಎಂದು ವಿಷಾದಿಸಿದರು.
ಅಂದು ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ್ದ ಉದ್ದೇಶ ಅತ್ಯಂತ ವೈಯಕ್ತಿಕವಾಗಿತ್ತು. ಈ ದೇಶದಲ್ಲಿ ಸರ್ವಾಧಿಕಾರಿಯಾಗಿ ಇರಬಲ್ಲೆ ಎಂಬ ಭ್ರಮೆಯಲ್ಲಿ ಯಾರೂ ಇರಬಾರದು. ಇದನ್ನು ಯಾರೂ ಒಪ್ಪುವುದಿಲ್ಲ. ಜನರಲ್ಲಿ ಸತತ ಜಾಗೃತಿ ಮೂಡಿಸುವ ಮೂಲಕ ಯಾವುದೇ ನೇತೃತ್ವ ಇಲ್ಲದೇ ಚುನಾವಣೆಯಲ್ಲಿ ವಿಜಯ ಸಾಧಿಸಬಹುದು. ಸಂವಿಧಾನವನ್ನು ಯಾವುದೇ ಕಾರಣಕ್ಕೂ ದುರುಪಯೋಗ ಪಡಿಸಿಕೊಳ್ಳಬಾರದು ಎಂಬ ಪ್ರಮುಖ ಮೂರು ಸಂಗತಿಗಳನ್ನು ಅವರು ಹೇರಿದ್ದ ತುರ್ತು ಪರಿಸ್ಥಿತಿಯು ಕಲಿಸಿಕೊಟ್ಟಿದೆ ಎಂದು ವಿವರಿಸಿದರು.
ದೇಶ ಮುನ್ನಡೆಯಬೇಕಾದರೆ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೋಗಬೇಕು. ಭೂತಕಾಲದಲ್ಲಿ ಆದ ತಪ್ಪು- ಒಪ್ಪುಗಳನ್ನು ಮೆಲಕು ಹಾಕಿ ವರ್ತಮಾನದ ಸಂಕಟ, ಸದವಕಾಶಗಳನ್ನು ಗುರುತಿಸಬೇಕು. ಆಗಲೇ ಭವಿಷ್ಯ ಉಜ್ವಲ, ಪ್ರಜ್ವಲವಾಗಿ ಬೆಳಗಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಇಂದಿರಾ ಗಾಂಧಿ ಅವರು ಕೇವಲ ತಮ್ಮ ಅಧಿಕಾರ ಉಳಿಸಿಕೊಳ್ಳಬೇಕು. ಯಾವುದೇ ಪ್ರತಿರೋಧ ಇರಬಾರದು ಎನ್ನುವ ಕಾರಣಕ್ಕೆ ತುರ್ತು ಪರಿಸ್ಥಿತಿ ಹೇರಿ ಸರ್ವಾಧಿಕಾರಿಯಾಗಿ ಮೆರೆಯಲು ಹೋದರು. ಆದರೆ, ಆಗ ದೇಶದಲ್ಲಿ ಆರ್ ಎಸ್ ಎಸ್ ಸೇರಿ ಅನೇಕ ಸಂಘಟನೆಗಳು ಜನರಲ್ಲಿ ಜಾಗೃತಿ ಮೂಡಿಸಿ ಸಂದಿಗ್ಧ ಸ್ಥಿತಿಯನ್ನು ವಿರೋಧಿಸುವ ಮನೋವೇದಿಕೆ ರೂಪುಗೊಳ್ಳುವಂತೆ ಮಾಡಿದವು ಎಂದು ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ತುರ್ತು ಪರಿಸ್ಥಿತಿ ಹೇರಿದ್ದ ಅಂದಿನ ಕಾಂಗ್ರೆಸ್ ಗೂ ಇಂದಿನ ಕಾಂಗ್ರೆಸ್ ಗೂ ಯಾವುದೇ ಭಿನ್ನತೆ ಇಲ್ಲ. ಈಗಲೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲವನ್ನೂ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಅಚ್ಯುತ ಲಿಮಯೆ ಮಾತನಾಡಿ, ತುರ್ತು ಪರಿಸ್ಥಿತಿಯಲ್ಲಿ ತಾವು ಅನುಭವಿಸಿದ ಹಲವು ಘಟನೆಗಳನ್ನು ಮೆಲಕು ಹಾಕಿದರು.
ಕೆಸಿಸಿಐ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ ಭುಗಿಲು ಪುಸ್ತಕ ಲೋಕಾರ್ಪಣೆ ಮಾಡಿದರು.
ಸತ್ಕಾರ: ತುರ್ತು ಪರಿಸ್ಥಿತಿಯಲ್ಲಿ ಬಂಧಿತರಾಗಿದ್ದ ಅಚ್ಯುತ ಲಿಮಯೆ, ಮಹಾದೇವ ದಿವಟೆ, ಎಚ್.ಜಿ. ಇಮಾಮದಾರ, ಶ್ರೀಕಾಂತ ದೇಸಾಯಿ, ವೇದವ್ಯಾಸ ಆಚಾರ, ಆನಂದ ದೇಸಾಯಿ ಅವರನ್ನು ಸತ್ಕರಿಸಲಾಯಿತು.
ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಸಂದೀಪ ಬೂದಿಹಾಳ, ಗೋವಿಂದಪ್ಪ ಗೌಡಪ್ಪಗೋಳ, ರಾಜಣ್ಣ ಕೊರವಿ, ತೋಟಪ್ಪ ನಿಡಗುಂದಿ, ವಿನಾಯಕ ತಾಂಬೆ, ಜಯತೀರ್ಥ ಕಟ್ಟಿ, ರಾಜಕುಮಾರ ಪಾಟೀಲ, ಇತರರು ಭಾಗಿಯಾಗಿದ್ದರು.
ವಿಎಚ್ ಪಿ ಪ್ರಾಂತ ಕೋಶಾಧ್ಯಕ್ಷ ಸಂಜು ಬಡಸ್ಕರ ಸ್ವಾಗತಿಸಿದರು. ಮಹೇಂದ್ರ ಕೌತಾಳ ಪ್ರಾಸ್ತಾವಿಕ ಮಾತನಾಡಿದರು. ಸಂಜಯ ಕಪಟಕರ ಪ್ರತಿಜ್ಞಾವಿಧಿ ಬೋಧಿಸಿದರು. ವಿನಾಯಕ ತಲಗೇರಿ ವೈಯಕ್ತಿಕ ಗೀತೆ ಹಾಡಿದರು.