ಕೆಜಿಎಫ್: ಕೆಜಿಎಫ್ ಕ್ಷೇತ್ರವು ಒಂದೆಡೆ ಆಂಧ್ರಪ್ರದೇಶ, ಮತ್ತೊಂದೆಡೆ ತಮಿಳುನಾಡು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವುದರಿಂದ ಕೆಲಸ ಮಾಡುವವರ ಸಂಖ್ಯೆ ಅಧಿಕವಾಗಿದೆ ಎಂದು ಶಾಸಕಿ ರೂಪಕಲಾ ಹೇಳಿದರು.
ನಗರದ ರಾರ್ಬಟ್ಸನ್ಪೇಟೆಯ ಸರ್ಕಾರಿ ಆಸ್ಪತ್ರೆ ಮುಂಭಾಗ ನೂತನವಾಗಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನ್ನನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಗರದ ಹೃದಯ ಭಾಗದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಕ್ಷೇತ್ರದ ಜನತೆಯ ಬಹುದಿನಗಳ ಕನಸಾಗಿದ್ದ ಇಂದಿರಾ ಕ್ಯಾಂಟೀನ್ಅನ್ನು ಪ್ರಾರಂಭಿಸಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳು, ಅವರ ಸಂಬಂಧಿಕರು ಹಾಗೂ ಆಟೋ ಚಾಲಕರು, ಕಾಲೇಜು ವಿದ್ಯಾರ್ಥಿಗಳಿಗೆ, ಬಡ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದರು.
ರಾಜ್ಯದಲ್ಲಿ ಮುಚ್ಚಲ್ಪಟ್ಟಿದ್ದ ಇಂದಿರಾ ಕ್ಯಾಂಟೀನ್ಗಳನ್ನು ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಮರು ಪ್ರಾರಂಭಿಸಲಾಗುತ್ತಿದೆ. ರಾಜ್ಯದ ವಿವಿಧೆಡೆಗಳಲ್ಲಿ ಇಂದಿರಾ ಕ್ಯಾಂಟೀನ್ಗಳು ಚಾಲ್ತಿಯಲ್ಲಿದ್ದಾಗ ಕ್ಷೇತ್ರದ ಜನರು ನನಗೆ ವ್ಯಾಟ್ಸಆ್ಯಪ್ನಲ್ಲಿ ಮೆಸೇಜ್ಗಳನ್ನು ಕಳುಹಿಸಿ ಕೆಜಿಎಫ್ ನಗರದಲ್ಲಿ ಯಾವಾಗ ಇಂದಿರಾ ಕ್ಯಾಂಟೀನ್ ಆರಂಭವಾಗಲಿದೆ ಎಂದು ಪ್ರಶ್ನೆ ಮಾಡುತ್ತಲೇ ಇದ್ದರು. ಅವರ ಪ್ರಶ್ನೆಗಳಿಗೆ ಇಂದು ಉತ್ತರ ದೊರೆತಿದ್ದು, ಇದೀಗ ಅಧಿಕೃತವಾಗಿ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಗೊಳಿಸಿದ್ದು ನನಗೆ ಸಂತೃಪ್ತಿ ನೀಡಿದೆ ಎಂದರು.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಜಿಲ್ಲೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗಿದ್ದು, ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಆರಂಭವಾದ ಕ್ಯಾಂಟೀನ್ ಮುಚ್ಚಲು ಕಾರಣಗಳೇನು ಎಂಬುದನ್ನು ಪರಿಶೀಲಿಸುವುದಾಗಿ ತಿಳಿಸಿದರು.
ಇಂದಿರಾ ಕ್ಯಾಂಟೀನ್ನಲ್ಲಿ 5 ರೂ.ಗೆ ತಿಂಡಿ, 10 ರೂ.ಗಳಿಗೆ ಊಟ 10 ದೊರೆಯಲಿದ್ದು, ಪ್ರತಿದಿನ ಹಸಿದು ಬಂದವರಿಗೆ ನೀಡುವ ಆಹಾರದಲ್ಲಿ ಗುಣಮಟ್ಟಕಾಪಾಡಿಕೊಳ್ಳಬೇಕು ಎಂದು ಟೆಂಡರ್ದಾರರಿಗೆ ಆದೇಶ ನೀಡಲಾಗಿದೆ. ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಿರುವುದರಿಂದ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.
ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಉಪಾಧ್ಯಕ್ಷ ಜರ್ಮನ್, ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಕೆಜಿಎ್ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಪೌರಾಯುಕ್ತ ಪವನ್ಕುಮಾರ್, ತಹಸೀಲ್ದಾರ್ ನಾಗವೇಣಿ, ಎಇಇ ಮಂಜುನಾಥ್, ನಗರಸಭೆ ಸದಸ್ಯರಾದ ಕರುಣಾಕರನ್, ಪ್ರವಿಣ್, ವೇಣುಗೋಪಾಲ್, ಮಗಿ, ಸುರೇಶ್, ರಮೇಶ್, ಮಾಣಿಕ್ಯಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕಷ್ಣರೆಡ್ಡಿ, ಮುದುಲೈ ಮುತ್ತು, ಮೋಹನ್ ರಾಜ್, ರಾಂಬಾಬು, ನಾಗರಾಜ್ ಇದ್ದರು.