ಹುಬ್ಬಳ್ಳಿ: ಇಲ್ಲಿಯ ಮಂಟೂರ ರಸ್ತೆ ಸ್ಮಶಾನ ಜಾಗದಲ್ಲಿ ನಿರ್ಮಾಣವಾಗುತ್ತಿದ್ದ ಇಂದಿರಾ ಕ್ಯಾಂಟೀನ್ ವಿಷಯ ರಾಜಕೀಯಕ್ಕೆ ಬಳಕೆಯಾಗುತ್ತಿರುವುದರ ಮಧ್ಯೆ ಮಹಾನಗರ ಪಾಲಿಕೆಯು ಅದರ ಸ್ಥಳಾಂತರಕ್ಕೆ ಮುಂದಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಸೂಚನೆ ಮೇರೆಗೆ ಹರಿಶ್ಚಂದ್ರ ಕಾಲನಿಯಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿದ್ದ ಇಂದಿರಾ ಕ್ಯಾಂಟೀನ್ ಅನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.
ಇದಕ್ಕಾಗಿ ಹೊಸದಾಗಿ ಬೇರೆ ಕಡೆ ಸರ್ಕಾರಿ ಜಾಗ ಗುರುತಿಸಲು ಸಚಿವರು ಸೂಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸ್ಮಶಾನ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ವಿಷಯ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿತ್ತು.
ಶಾಸಕ ಪ್ರಸಾದ ಅಬ್ಬಯ್ಯ ಅವರು ಅದೇ ಜಾಗದಲ್ಲಿ ಕ್ಯಾಂಟೀನ್ ನಿರ್ಮಿಸುವ ಪಣ ತೊಟ್ಟಿದ್ದರು. ಇದನ್ನು ವಿರೋಧಿಸಿ ಶ್ರೀರಾಮ ಸೇನೆ ಹಾಗೂ ವಿವಿಧ ಸಂಘಟನೆಗಳ ಪ್ರತಿಭಟನೆಗೆ ಇಳಿದಿದ್ದವು.
ಅಲ್ಲದೇ ವಿವಿಧ ಸಂಟನೆಗಳ ಪದಾಧಿಕಾರಿಗಳು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ಸ್ಥಳಾಂತರಕ್ಕೆ ಒತ್ತಾಯಿಸಿದ್ದರು.
ಈ ಮಧ್ಯೆ ಕೆಲ ಸಂಘಟನೆಗಳ ಕಾರ್ಯಕರ್ತರು ಅದೇ ಜಾಗದಲ್ಲಿ ಕ್ಯಾಂಟೀನ್ ಬೇಕು. ಕಡು ಬಡವರು, ಹಿಂದುಳಿದವರು ಈ ಪ್ರದೇಶದಲ್ಲಿದ್ದು, ಅವರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದರು.
ಶ್ರೀರಾಮ ಸೇನೆ ಕಾರ್ಯಕರ್ತರು ಸೆ. 25ರ ಗಡುವು ನೀಡಿ ಕೂಡಲೇ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿದ್ದರು. ಇದೀಗ ಸಚಿವರ ಸೂಚನೆ ಮೇರೆಗೆ ಕ್ಯಾಂಟೀನ್ ಸ್ಥಳಾಂತರಕ್ಕೆ ಮಹಾನಗರ ಪಾಲಿಕೆ ಮುಂದಾಗಿದ್ದರಿಂದ ಸಂಭಾವ್ಯ ಸಂಘರ್ಷಕ್ಕೆ ತಡೆ ನೀಡಿದಂತಾಗಿದೆ.