ಹಾನಗಲ್ಲ: ತಾಲೂಕಿನ ಜನತೆಯ ಬಹುದಿನಗಳ ಕನಸಿನ ಇಂದಿರಾ ಕ್ಯಾಂಟೀನ್ ಆರಂಭಗೊಂಡಿದ್ದು, ಶಾಸಕ ಶ್ರೀನಿವಾಸ ಮಾನೆ ಹಾಗೂ ಗಣ್ಯರು ಇಂದಿರಾ ಕ್ಯಾಂಟೀನ್‌ನಲ್ಲಿ ಉಪಹಾರ ಸವಿದರು.
ಕ್ಯಾಂಟೀನ ಆರಂಭವಾಗಬೇಕು ಎಂಬ 2-3 ವರ್ಷಗಳ ಬೇಡಿಕೆ ಈಡೇರಿದೆ. ಪಟ್ಟಣದ ಆಡಳಿತ ಭವನದ ಬಳಿ ಇಂದಿರಾ ಕ್ಯಾಂಟೀನ್‌ಗೆ ಶಾಸಕರು ಸೋಮವಾರ ಚಾಲನೆ ನೀಡಿದರು. ದೂರದ ಗ್ರಾಮಗಳಿಂದ ಪಟ್ಟಣಕ್ಕೆ ಆಗಮಿಸುವ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ದೊರೆಯುತ್ತದೆ ಎಂದರು.
ಪುರಸಭೆ ಪ್ರಭಾರ ಅಧ್ಯಕ್ಷೆ ವೀಣಾ ಗುಡಿ ಮಾತನಾಡಿ, ಇಂದಿರಾ ಕ್ಯಾಂಟೀನ್ ಬಡವರಿಗೆ ಸಹಕಾರಿಯಾಗಿದೆ. ಇಲ್ಲಿ ಅತ್ಯುತ್ತಮ ಉಪಹಾರ-ಊಟ ಅತ್ಯಂತ ಕಡಿಮೆ ದರದಲ್ಲಿ ರುಚಿ ಶುಚಿಯಾಗಿ ಸಿಗುತ್ತದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ನಾಗಪ್ಪ ಸವದತ್ತಿ, ಪರಶುರಾಮ ಖಂಡೂನವರ, ಮಮತಾ ಆರೆಗೊಪ್ಪ, ಖುರ್ಷಿದ ಹುಲ್ಲತ್ತಿ, ರವಿ ದೇಶಪಾಂಡೆ, ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಇತರರಿದ್ದರು.