ಜಿಲ್ಲೆ

ರಟ್ಟಿಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನ್ ಶೀಘ್ರ ಆರಂಭ

ರಟ್ಟಿಹಳ್ಳಿ: ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಜಾಗ ಪರಿಶೀಲಿಸಿ ಮಾತನಾಡಿದ ಅವರು, ಹಾವೇರಿಗೆ ಇತ್ತೀಚೆಗೆ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಯಾಂಟೀನ್ ಸ್ಥಾಪನೆಗೆ ಆದೇಶಿಸಿದ್ದರು. ಆದ್ದರಿಂದ ಜಿಲ್ಲಾಧಿಕಾರಿ ನಿರ್ದೇಶನದಂತೆ ಪಟ್ಟಣದಲ್ಲಿ ತಾಲೂಕಿನ ಅಧಿಕಾರಿಗಳು ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಸಮ್ಮುಖದಲ್ಲಿ ಜಾಗ ಪರಿಶೀಲಿಸಲಾಗುತ್ತಿದೆ ಎಂದರು.

ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಪಟ್ಟಣದ ಹಳೇ ಪೊಲೀಸ್ ಠಾಣೆಯ ಆವರಣ ಮತ್ತು ಬಿಳಚಿ ಓಣಿಯಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಗ ಪರಿಶೀಲನೆ ಮಾಡಲಾಗಿದೆ. ಜಿಲ್ಲಾ ಮಟ್ಟದ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರನ್ನು ಶೀಘ್ರವೇ ಕರೆಯಿಸಿ, ಅವರೊಂದಿಗೆ ಮತ್ತೊಮ್ಮೆ ಸ್ಥಳ ಪರಿಶೀಲಿಸಿ, ಜಾಗ ಅಂತಿಮಗೊಳಿಸಲಾಗುವುದು. ಇಂದಿರಾ ಕ್ಯಾಂಟೀನ್ ಸೌಲಭ್ಯದಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ತಹಸೀಲ್ದಾರ್ ಗುರುಬಸವರಾಜ ಮಾತನಾಡಿ, ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸೂಕ್ತವಾಗಿರುವ ಜಾಗ ಅಂತಿಮಗೊಳಿಸಲಾಗುವುದು ಎಂದರು.

ಕಂದಾಯ ನಿರೀಕ್ಷಕ ಶಂಕರ ಎಂ.ಎ., ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ರವೀಂದ್ರ ಮುದಿಯಪ್ಪನವರ, ಮಖಬುಲಸಾಬ ಮುಲ್ಲಾ, ಕಪಿಲದೇವ ಪೂಜಾರ, ಮಂಜುನಾಥ ಮಾಸೂರು, ಮಂಜು ಅಸ್ವಾಲಿ, ರಾವಣ್ಣ ಗೌರಕ್ಕನವರ, ರಾಮಣ್ಣ ಹರಿಹರ, ಬಿ.ಎಸ್. ಬಸನಗೌಡ್ರ, ಮಲ್ಲಿಕಾರ್ಜುನಗೌಡ ಪಾಟೀಲ, ರಿಜ್ವಾನ ಕಲಪನಹಳ್ಳಿ, ಪಪಂ ಸಿಬ್ಬಂದಿ ರಾಜಕುಮಾರ ಹೇಂದ್ರೆ, ಪರಮೇಶಪ್ಪ ಅಂತರವಳ್ಳಿ ಇತರರು ಉಪಸ್ಥಿತರಿದ್ದರು.