ಹಾನಗಲ್ಲ: ಪಟ್ಟಣದಲ್ಲಿ ಬಹು ನಿರೀಕ್ಷಿತ ಇಂದಿರಾ ಕ್ಯಾಂಟೀನ್ ಮೇ 4ರಂದು ಉದ್ಘಾಟನೆಗೊಳ್ಳಲಿದ್ದು, ಅಂತಿಮ ಹಂತದ ಕಾಮಗಾರಿ ಭರದಿಂದ ಸಾಗಿದೆ. ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು.
ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ ಹಾಗೂ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಅವರು ಗುರುವಾರ ಅಂತಿಮ ಹಂತದ ಕಾಮಗಾರಿಯನ್ನು ಮತ್ತಷ್ಟು ಚುರುಕುಗೊಳಿಸಿದರು. 87 ಲಕ್ಷ ರೂ. ವೆಚ್ಚದ ಕ್ಯಾಂಟೀನ್ ಪ್ರಾಥಮಿಕ ಹಂತದ ಕಾಮಗಾರಿ ಮುಗಿದು ಹಲವು ತಿಂಗಳುಗಳೇ ಮುಗಿದಿವೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲೂಕಿನ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿಯೇ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಬೇಕೆಂಬ ಚರ್ಚೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಮೇ 4 ರಂದು ಉದ್ಘಾಟನೆಗೊಳ್ಳಲಿದೆ.
‘ಕ್ಯಾಂಟೀನ್‌ನಲ್ಲಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಊಟ ಉಪಹಾರ ದೊರೆಯುತ್ತಿದೆ. 5 ರೂ.ಗೆ ಉಪಹಾರ, 10 ರೂ.ಗೆ ಊಟದ ವ್ಯವಸ್ಥೆ ಇದೆ. ಎಲ್ಲ ಕಚೇರಿಗಳ ಸಂಕೀರ್ಣವೇ ಇರುವ ಮಧ್ಯವರ್ತಿ ಸ್ಥಳದಲ್ಲಿ ಕ್ಯಾಂಟೀನ್ ಇರುವುದರಿಂದ ಬಹಳಷ್ಟು ಜನರಿಗೆ ಸದುಪಯೋಗವಾಗಲಿದೆ’ ಎಂದು ಪರಶುರಾಮ ಖಂಡೂನವರ ಹೇಳಿದರು.
ಇಂದಿರಾ ಕ್ಯಾಂಟೀನ್ ಕಾಮಗಾರಿ ಬಹುತೇಕ ಮುಗಿದಿತ್ತು. ಈಗ ಬಣ್ಣ ಹಚ್ಚುವುದು ಹಾಗೂ ಅಡುಗೆ ವ್ಯವಸ್ಥೆಗೆ ಬೇಕಾಗುವ ಆಂತರಿಕ ವ್ಯವಸ್ಥೆಯ ಕಾರ್ಯಗಳು ನಡೆದಿವೆ. ಮೇ 5ರಿಂದಲೇ ಸಾರ್ವಜನಿಕರಿಗೆ ಉಪಹಾರ ಹಾಗೂ ಊಟ ಲಭ್ಯವಾಗಲಿದೆ. ವೈ.ಕೆ. ಜಗದೀಶ, ಪುರಸಭೆ ಮುಖ್ಯಾಧಿಕಾರಿ.