ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರ ಮಂಟೂರ ರಸ್ತೆಯ ರುದ್ರಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಿುಸಿರುವುದಕ್ಕೆ ಶ್ರೀ ರಾಮ ಸೇನೆ ಕಾರ್ಯಕರ್ತರು ಸೋಮವಾರ ವಿರೋಧ ವ್ಯಕ್ತಪಡಿಸಿದರು.
ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹಾಗೂ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ, ಸ್ಮಶಾನದಲ್ಲಿ ನಿರ್ವಿುಸಿರುವ ಇಂದಿರಾ ಕ್ಯಾಂಟೀನ್ ತಕ್ಷಣ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಾವೇ ತೆರವು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಹಿಂದುಗಳ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಿುಸಿರುವುದು ಖಂಡನೀಯ. ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರದ ದರ್ಪದಿಂದ ಈ ರೀತಿ ಮಾಡಿದ್ದಾರೆ. ಇಲ್ಲಿ ಕ್ಯಾಂಟೀನ್ ನಿರ್ವಿುಸುವುದಾರೆ ಮುಸ್ಲಿಮರ ಖಬರಸ್ತಾನದಲ್ಲಿ ಕಟ್ಟಲಿ ಎಂದರು.
ಇಂದಿರಾ ಕ್ಯಾಂಟೀನ್ ಊಟ ಮಾಡುವ ಸ್ಥಳ. ಸ್ಮಶಾನದಲ್ಲಿ ಯಾರು ಊಟಕ್ಕೆ ಬರುತ್ತಾರೆ? ಇಲ್ಲಿ ತಿಥಿ ಮಾಡಲು ಬರುತ್ತಾರೆ. ಯಾರೂ ಹೆಣಗಳ ಮೇಲೆ ಊಟ ಮಾಡುವುದಿಲ್ಲ ಎಂದು ಕಿಡಿಕಾರಿದರು.
ಸೇನೆಯ ಮುಖಂಡರಾದ ಗಂಗಾಧರ ಕುಲಕರ್ಣಿ, ಅಣ್ಣಪ್ಪ ದೇವಟಗಿ, ಪ್ರವೀಣ ಮಾಳದಕರ, ಮಂಜುನಾಥ ಕಾಟಕರ, ಇತರರು ಇದ್ದರು.