ನಿಡಗುಂದಿ: ಇಂದಿನ ದಿನಮಾನದಲ್ಲೂ ಕಡಿಮೆ ದರದಲ್ಲಿ ಆಹಾರ ವಿತರಿಸುವ ಇಂದಿರಾ ಕ್ಯಾಂಟಿನ್ ಬಡವರಿಗೆ ವರವಾಗಲಿದ್ದು, ಸರ್ಕಾರದ ಪ್ರಣಾಳಿಕೆಯಲ್ಲಿನ ಘೋಷಣೆಯಂತೆ ಇಂದಿರಾ ಕ್ಯಾಂಟಿನ್ ನಿರ್ಮಿಸಲಾಗಿದೆ ಎಂದು ಜವಳಿ ಹಾಗೂ ಕಬ್ಬು ಅಭಿವೃದ್ಧಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ 1.50 ಕೋಟಿ ರೂ. ವೆಚ್ಚದಲ್ಲಿ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಎಂಪಿಎಸ್ ಶಾಲೆಯಲ್ಲಿ 15 ಲಕ್ಷ ರೂ. ವೆಚ್ಚದ ಶಾಲಾ ಕೊಠಡಿ ದುರಸ್ತಿಗೆ ಭೂಮಿಪೂಜೆ, ಮುದ್ದೇಶ್ವರ ಮಂಗಲ ಭವನದ ಬಳಿ 10 ಲಕ್ಷ ರೂ. ವೆಚ್ಚದ ರಂಗಮಂದಿರ, ಸಿದ್ಧರ ಕಾಲನಿಯಲ್ಲಿ 20 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡ ಲೋಕಾರ್ಪಣೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದೆ. ಪಟ್ಟಣದ ಹೃದಯಭಾಗದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದು ಜನತೆಗೆ ಅನುಕೂಲವಾಗಿದೆ. ನಿಡಗುಂದಿ ತಾಲೂಕು ಕೇಂದ್ರವಾಗಿದ್ದು, ಸಾಕಷ್ಟು ವಹಿವಾಟು ಚಟುವಟಿಕೆಗೆ ಗ್ರಾಮೀಣರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಬಡವರ ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಹಸಿವು ಇಂಗಿಸುವಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಲೋಕಾರ್ಪಣೆಯಾಗಿದೆ. ಇದನ್ನು ಉತ್ತಮ ನಿರ್ವಹಣೆ ಮಾಡುವ ಮೂಲಕ ಜನರಿಗೆ ನಿರಂತರ ಇದರ ಉಪಯೋಗವಾಗಿಸುವ ಕಾರ್ಯ ಮಾಡಬೇಕು ಎಂದರು. ನಂತರ ಸಚಿವರು ಇಂದಿರಾ ಕ್ಯಾಂಟೀನ್‌ದಲ್ಲಿ ಉಪ್ಪಿಟ್ಟು, ಕೇಸರಿಬಾತ್ ಉಪಾಹಾರದ ರುಚಿ ಸವಿದರು.
ಕಮದಾಳ ಪುನರ್ವಸತಿ ಕೇಂದ್ರದಲ್ಲಿನ ಶಾಲೆ ಕಟ್ಟಡಕ್ಕೆ ಮಂಜೂರಾದ 61.59 ಲಕ್ಷ ರೂಗಳಲ್ಲಿ ಉಳಿಕೆ ಮೊತ್ತವನ್ನು ಶಾಲೆ ಕಾಂಪೌಂಡ್ ಎತ್ತರಗೊಳಿಸಲು ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಸಂಘದ ಮುಖಂಡರು ಸಚಿವರಿಗೆ ಮನವಿ ಸಲ್ಲಿಸಿದರು.
ಜಿವಿವಿಎಸ್ ಶಿಕ್ಷಣ ಸಂಸ್ಥೆ ಚೇರ್ಮನ್ ಸಿದ್ದಣ್ಣ ನಾಗಠಾಣ, ಪಪಂ ಅಧ್ಯಕ್ಷೆ ದೇಸಾಯಿ ಜಂಬಕ್ಕ ವಿಭೂತಿ, ಉಪಾಧ್ಯಕ್ಷೆ ಗೌರಮ್ಮ ಹುಗ್ಗಿ, ತಹಸೀಲ್ದಾರ್ ಎ.ಡಿ. ಅಮರವಾಡಗಿ, ಮುಖ್ಯಾಧಿಕಾರಿ ವಿರೇಶ ಹಟ್ಟಿ, ಪಪಂ ಜೆಇ ಅಶ್ರ್ ಅಲಿ ಮಕಾನದಾರ, ಮುಖಂಡರಾದ ಪರಶುರಾಮ ಕಾರಿ, ಎಂ.ಎಂ. ಮುಲ್ಲಾ, ಶೇಖರ ರೂಡಗಿ, ಸಂಗಮೇಶ ಕೆಂಭಾವಿ, ಗಂಗಾಧರ ವಾರದ, ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು ಇದ್ದರು.