ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಬಡವರಿಗೆ ಆರೋಗ್ಯ ಭದ್ರತೆ ಕಲ್ಪಿಸಿಕೊಡುವ ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿಕೊಳ್ಳಲು ಜಿಲ್ಲೆಯ ಜನರು ನಿರಾಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಗುರಿ ಸಾಧನೆಯಲ್ಲಿ ಮೈಸೂರು ಬಹಳ ಹಿಂದೆ ಬಿದ್ದಿದೆ.
‘ಆಯುಷ್ಮಾನ್’ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಚಿಕಿತ್ಸೆಗೆ ಹಣ ಪಾವತಿಸಲು ಸಾಧ್ಯವಾಗದ ಬಡಜನರಿಗೆ ಇದು ವರದಾನವಾಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಈ ಕಾರ್ಡ್ ವಿತರಣೆಯಾಗಿಲ್ಲ. ಇದನ್ನು ಫಲಾನುಭವಿಗಳಿಗೆ ಕೊಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೆಚ್ಚಿನ ಶ್ರಮವನ್ನೂ ಹಾಕುತ್ತಿಲ್ಲ. ಆದ್ದರಿಂದ ಈ ವಿಷಯದಲ್ಲಿ ಪ್ರಗತಿ ಗೋಚರವಾಗುತ್ತಿಲ್ಲ.
ಜಿಲ್ಲಾಡಳಿತದ ಮಾಹಿತಿ ಪ್ರಕಾರ, 30.01 ಲಕ್ಷ ಜನಸಂಖ್ಯೆ ಜಿಲ್ಲೆಯಲ್ಲಿದೆ. ಆದರೆ ಜನಸಂಖ್ಯೆಗೆ ತಕ್ಕಷ್ಟು ಆಯುಷ್ಮಾನ್ ಕಾರ್ಡ್‌ಗೆ ಗುರಿ ನಿಗದಿಪಡಿಸಿಲ್ಲ. ಬರೀ 25 ಲಕ್ಷ ಕಾರ್ಡ್ ವಿತರಣೆ ಮಾಡಲು ಗುರಿ ಹಾಕಿಕೊಳ್ಳಲಾಗಿದೆ. ಈ ಯೋಜನೆ ಪ್ರಾರಂಭವಾಗಿ 5 ವರ್ಷವಾದರೂ ಜಿಲ್ಲೆಯಲ್ಲಿ 7,47,751 ಕಾರ್ಡ್‌ಗಳನ್ನು ಮಾತ್ರ ಈವರೆಗೆ ವಿತರಿಸಲಾಗಿದೆ.
ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ 1,25,576 ಕಾರ್ಡ್‌ಗಳನ್ನು ಹೊಸದಾಗಿ ಸೃಜನೆಗೊಳಿಸಲಾಗಿದೆ. ಬರೀ ಶೇ.29ರಷ್ಟು ಪ್ರಗತಿ ಆಗಿದೆ. ಪ್ರಜ್ಞಾವಂತರು ಹೆಚ್ಚಿರುವ ಮೈಸೂರು ನಗರದಲ್ಲೇ ಕಡಿಮೆ ಕಾರ್ಡ್‌ಗಳ ನೋಂದಣಿಯಾಗಿದೆ. ನಗರವಾಸಿಗಳು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಕೊಂಚ ತೃಪ್ತಿಕರ ಸಾಧನೆ ಕಂಡಿದೆ.
ಆಯುಷ್ಮಾನ್ ಕಾರ್ಡ್ ವಿತರಣೆಗೆ ನಿರ್ದಿಷ್ಟ ಕ್ರಿಯಾಯೋಜನೆ ಹಾಕಿಕೊಂಡು ಕೆಲಸ ಮಾಡಲು ಕ್ರಮ ವಹಿಸಬೇಕು. ಗುರಿ ಸಾಧಿಸಲು ಗ್ರಾಮ ಪಂಚಾಯಿತಿಗಳ ಪಿಡಿಒ, ತಹಸೀಲ್ದಾರ್, ಕಂದಾಯ ನಿರೀಕ್ಷಕರು, ಆರೋಗ್ಯಾಧಿಕಾರಿಗಳು ನೆರವು ಪಡೆದುಕೊಂಡು ಈ ಪ್ರಕ್ರಿಯಗೆ ವೇಗ ನೀಡಬೇಕೆಂದು ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚನೆ ನೀಡಿದ್ದಾರೆ.
ಸದ್ಯ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಡಿಸೆಂಬರ್ ಅಂತ್ಯಕ್ಕೆ ಗುರಿ ಸಾಧಿಸಲು ಸಂಕಲ್ಪ ಮಾಡಿದೆ. ಕಾರ್ಡ್ ನೋಂದಣಿ ಅಭಿಯಾನವನ್ನೇ ಕೈಗೊಂಡಿದೆ. ನಗರ ಪ್ರದೇಶದಲ್ಲಿರುವ ಮೈಸೂರು ಒನ್, ಕರ್ನಾಟಕ ಒನ್, ಗ್ರಾಮಾಂತರ ಪ್ರದೇಶದಲ್ಲಿರುವ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ಬಳಕೆ ಮಾಡಿಕೊಂಡು ಸಾರ್ವಜನಿಕರಿಗೆ ಕಾರ್ಡ್ ವಿತರಣೆ ಮಾಡಲು ಮುಂದಾಗಿದೆ. ನೋಂದಣಿಯಿಂದ ಸೇವಾ ಕೇಂದ್ರಗಳಿಗೆ ಪ್ರತಿ ಕಾರ್ಡ್‌ಗೆ 20 ರೂ. ದೊರೆಯಲಿದೆ. ಪಡಿತರ ಚೀಟಿ, ಆಧಾರ್ ಕಾರ್ಡ್‌ನ ದಾಖಲೆ ಒದಗಿಸಿದರೆ ಆಯುಷ್ಮಾನ್ ಕಾರ್ಡ್ ಅನ್ನು ಸಾರ್ವಜನಿಕರಿಗೆ ಉಚಿತವಾಗಿ ಮಾಡಿಕೊಡಲಾಗುತ್ತದೆ.
ನವೆಂಬರ್ ಮಾಹೆಯಲ್ಲಿ ಆಯುಷ್ಮಾನ್ ಮತ್ತು ಸಂಬಂಧಿಸಿದ ಲಿಂಕ್ ಹೊಸದಾಗಿ ಸೃಜನೆ ಮಾಡಿಸಲು ಜಿಲ್ಲಾ ಮಟ್ಟದಿಂದ ಪುನರಾರಂಭಗೊಂಡಿದೆ. ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಕಾರ್ಯಕ್ರಮಾಧಿಕಾರಿಗಳು, ಸಿಬ್ಬಂದಿ ಬಳಸಿಕೊಂಡು ಹೆಚ್ಚು ಪ್ರಗತಿ ಸಾಧಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
ಆರೋಗ್ಯ ಇಲಾಖೆ ವತಿಯಿಂದ ಕರ್ತವ್ಯನಿರತ ಎಲ್ಲ ವೈದ್ಯಾಧಿಕಾರಿಗಳು, ಆರೋಗ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರಿಗೂ ಅರಿವು ಮೂಡಿಸಲಾಗುತ್ತಿದೆ. ಸ್ವಯಂ ಕಾರ್ಡ್ ಸೃಜನೆ ಮಾಡುವ ತರಬೇತಿ ಕಾರ್ಯಾಗಾರವನ್ನೂ ನೀಡಿ ಪ್ರಗತಿ ಸಾಧಿಸಲು ಕಸರತ್ತು ನಡೆಸಲಾಗುತ್ತಿದೆ. ಇಷ್ಟೆಲ್ಲ ಪ್ರಯತ್ನಗಳ ಬಳಿಕವೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಆಗುತ್ತಿಲ್ಲ ಏಕೆ ಎಂಬ ಪ್ರಶ್ನೆ ಮೂಡಿದೆ.
ಆಯುಷ್ಮಾನ್ ಕಾರ್ಡ್‌ನಿಂದ ಹೆಚ್ಚಿನ ಪ್ರಯೋಜನ ದೊರೆಯುವುದಿಲ್ಲ. ಹೀಗಾಗಿ ಕಾರ್ಡ್‌ಗೆ ನೋಂದಣಿ ಮಾಡಿಸಿಕೊಳ್ಳಲು ಬಹಳಷ್ಟು ಜನರು ಹಿಂದೇಟು ಹಾಕುತ್ತಾರೆ. ಈ ಕಾರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ಬಳಕೆಯಾಗಲಿದೆ. ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೇರ ಲಾಭ ಸಿಗುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ತುರ್ತು ಚಿಕಿತ್ಸೆ ಅಗತ್ಯ ಇರುವವರು ಹಾಗೂ ಅಪಘಾತಕ್ಕೆ ಒಳಗಾದವರು ಮಾತ್ರ ಆಯುಷ್ಮಾನ್ ಯೋಜನೆಯಡಿ ಗೊತ್ತುಪಡಿಸಲಾದ ಆಸ್ಪತ್ರೆಗಳಲ್ಲಿ ನೇರವಾಗಿ ದಾಖಲಾಗಿ ಚಿಕಿತ್ಸೆ ಪಡೆಯಬಹುದು. ಉಳಿದಂತೆ ಇತರ ಕಾಯಿಲೆ ಇರುವ ರೋಗಿಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ದಿಷ್ಟ ಚಿಕಿತ್ಸೆ ಲಭ್ಯ ಇಲ್ಲ ಎಂಬ ಬಗ್ಗೆ ದಾಖಲೆಗಳನ್ನು ಪಡೆದು ನಂತರವಷ್ಟೇ ಖಾಸಗಿ ಆಸ್ಪತ್ರೆಗೆ ದಾಖಲಾಗಬೇಕು.
ಸರ್ಕಾರಿ ಆಸ್ಪತ್ರೆ ವೈದ್ಯರು ಶಿಫಾರಸು(ರೆಫರ್) ಮಾಡಿದರೆ ಮಾತ್ರ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಪಡೆದುಕೊಳ್ಳಬಹುದಾಗಿದೆ. ಆದರೆ ಸರ್ಕಾರಿ ವೈದ್ಯರು ರೆಫರ್ ಮಾಡಿದ್ದಕ್ಕೆ ನಿರ್ದಿಷ್ಟ ಕಾರಣ ಕೊಡಬೇಕು. ನಮ್ಮ ಆಸ್ಪತ್ರೆಯಲ್ಲಿ ಯಾವ ಸೌಲಭ್ಯ ಅಲಭ್ಯ ಎಂಬ ಮಾಹಿತಿಯನ್ನೂ ನೀಡಬೇಕು. ಬಹುತೇಕ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ವೈದ್ಯಕೀಯ ಸೇವೆ ಲಭ್ಯಇದೆ.
ಜತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುವ ರೆಫರೆಲ್ ನಮೂನೆಯನ್ನು ಡಿಜಿಟಿಲೀಕರಿಸಲಾಗಿದೆ. ಹೀಗಾಗಿ ಯಾವ ಸರ್ಕಾರಿ ವೈದ್ಯರೂ ಶಿಫಾರಸು ಮಾಡಲ್ಲ. ಅವರು ಕೆ.ಆರ್. ಆಸ್ಪತ್ರೆ ಸೇರಿದಂತೆ ಜಿಲ್ಲಾಸ್ಪತ್ರೆಗಳಿಗೆ ಕಳುಹಿಸಿಕೊಡುತ್ತಾರೆ. ಜಯದೇವ ಹೃದ್ರೋಗ ಆಸ್ಪತ್ರೆಯಂತಹ ಕಡೆಯೂ ಶೇ.30ರಷ್ಟು ಮಾತ್ರ ರಿಯಾಯಿತಿ ದೊರೆಯಲಿದೆ. ಆದ್ದರಿಂದ ಈ ಕಾರ್ಡ್ ಮಾಡಿಸಲು ಹೆಚ್ಚಾಗಿ ಆಸಕ್ತಿ ತೋರುತ್ತಿಲ್ಲ ಎಂದೂ ಹೇಳಿದರು.
ಬಿಪಿಎಲ್ ಕುಟುಂಬಗಳು ವರ್ಷದಲ್ಲಿ ಗರಿಷ್ಠ 5 ಲಕ್ಷ ರೂ., ಎಪಿಎಲ್ ಕುಟುಂಬಗಳಿಗೆ ಗರಿಷ್ಠ 1.50 ಲಕ್ಷ ರೂ.ವರೆಗೂ ಚಿಕಿತ್ಸೆ ವೆಚ್ಚವನ್ನು ಭರಿಸಲು ಈ ಕಾರ್ಡ್ ನೆರವಾಗಲಿದೆ. ಈ ಕಾರ್ಡ್ ಅನ್ನು ದೇಶಾದ್ಯಂತ ಬಳಸಬಹುದು. ಆರೋಗ್ಯ ಸೇವೆ ಪಡೆಯಲು ದಾಖಲೆಗಳಿಗಾಗಿ ಅಲೆಯುವುದನ್ನೂ ಇದು ತಪ್ಪಿಸಲಿದೆ.
ಆಯುಷ್ಮಾನ್ ಕಾರ್ಡ್ ಸೃಜನೆ, ಕಾರ್ಡ್ ವಿತರಣೆಯಲ್ಲಿ ಹೆಚ್ಚಿನ ರೀತಿಯಲ್ಲಿ ಗುರಿ ಸಾಧಿಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಕಡಿಮೆ ಪ್ರಗತಿಯಾಗಿರುವ ತಾಲೂಕಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಹೆಚ್ಚಿನ ಪ್ರಗತಿ ಸಾಧಿಸಲು ಕ್ರಮ ತೆಗೆದುಕೊಳ್ಳಲಾಗಿದೆ.ಡಾ.ಪಿ.ಸಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ