ಬೆಳಗಾವಿ: ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಒಡೆತನದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಬಹುಕೋಟಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ 2,063 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಸಿಐಡಿ ಬೆಂಗಳೂರು ಆರ್ಥಿಕ ಅಪರಾಧ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಕೆ. ಪುರುಷೋತ್ತಮ ನೇತೃತ್ವದ ತಂಡ ಪ್ರಕರಣ ಕುರಿತು ಸುದೀರ್ಘ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ 35 ಶಾಖೆ ಹೊಂದಿರುವ ಸಂಗೊಳ್ಳಿ ರಾಯಣ್ಣ ಸೊಸೈಟಿ, 26 ಸಾವಿರ ಜನರಿಂದ ಠೇವಣಿ ಸಂಗ್ರಹಿಸಿತ್ತು. ಸೊಸೈಟಿ ಅಧ್ಯಕ್ಷ ಆನಂದ ಅಪ್ಪುಗೋಳ ಸೇರಿ ಆಡಳಿತ ಮಂಡಳಿಯ 13 ನಿರ್ದೇಶಕರು, ಗ್ರಾಹಕರಿಗೆ ಠೇವಣಿ ಮರಳಿಸದೆ ಸ್ವಂತಕ್ಕೆ ಬಳಸಿಕೊಂಡಿದ್ದರು ಎಂಬ ಆರೋಪ ಮಾಡಲಾಗಿತ್ತು.
ಈ ಕುರಿತು ಸಹಕಾರ ಇಲಾಖೆ ಉಪನಿಬಂಧಕರು 2017ರ ಸೆಪ್ಟೆಂಬರ್ 1ರಂದು ಬೆಳಗಾವಿಯ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಗರದ ಸಿಇಎನ್ ವಿಶೇಷ ಠಾಣೆ ಪೊಲೀಸರು ತನಿಖೆ ನಡೆಸಿದ್ದರು.
ತನಿಖೆಗೆ ಸೂಚಿಸಿದ್ದ ಎಚ್‌ಡಿಕೆ: ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿತ್ತು. ಮುಂಬೈ, ಕರ್ನಾಟಕದ ಕೂಲಿ ಕಾರ್ಮಿಕರಿಂದ ಹಿಡಿದು ಶ್ರೀಮಂತರು ಹಾಗೂ ಅಧಿಕಾರಿಗಳಿಂದ ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ 275 ಕೋಟಿ ರೂ. ಸ್ಥಿರ ಠೇವಣಿ ಪಡೆಯಲಾಗಿತ್ತು. ಸಿಐಡಿಯಿಂದ ಮೊದಲ ಹಂತದ ತನಿಖೆ ಪೂರ್ಣಗೊಂಡಿದ್ದು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.