ಜಿಲ್ಲೆ

ಜಾಗತಿಕ ರೇಷ್ಮೆಯಲ್ಲಿ ಶೇ.42ರಷ್ಟು ಭಾರತದ ಪಾಲು

ಮಂಜುನಾಥ ತಿಮ್ಮಯ್ಯ

ಮೈಸೂರು: ರೇಷ್ಮೆ ಕ್ಷೇತ್ರದಲ್ಲಿ ಭಾರತವು ಕಳೆದ 75 ವರ್ಷದಲ್ಲಿ ಅನೇಕ ಸಾಧನೆಗಳ ಮೂಲಕ ಮೈಲಿಗಲ್ಲು ನಿರ್ಮಾಣ ಮಾಡಿದೆ. ಭಾರತವೊಂದೇ ಹಿಪ್ಪುನೆರಳೆ, ತರಸ್, ಎರಿ ಮತ್ತು ಮುಗ ಎಂಬ ರೇಷ್ಮೆ ಉತ್ಪಾದನೆ ಮಾಡುತ್ತಿದೆ. ಜಾಗತಿಕ ಉತ್ಪಾದನೆಯಲ್ಲಿ 1949ರಲ್ಲಿ ಶೇ.6ರಷ್ಟಿದ್ದ ಭಾರತದ ಪಾಲು 2023-24ನೇ ಸಾಲಿಗೆ ಶೇ.42ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್ ತಿಳಿಸಿದರು.


ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ 1949ರಲ್ಲಿ ಕೇವಲ 1,242 ಮೆಟ್ರಿಕ್ ಟನ್‌ನಷ್ಟಿತ್ತು. ಇದೀಗ 38,913 ಮೆ.ಟನ್‌ಗೆ ಹೆಚ್ಚಳವಾಗಿದೆ. ರೇಷ್ಮೆ ರಫ್ತಿನಲ್ಲೂ ಏರಿಕೆಯಾಗಿದ್ದು, 75 ವರ್ಷ ಹಿಂದೆ 41 ಲಕ್ಷ ರೂ. ಮೊತ್ತದ ರೇಷ್ಮೆಯನ್ನು ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಇದೀಗ 2028 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.


ಕಳೆದ 7 ದಶಕದಲ್ಲಿ ಹಿಪ್ಪುನೆರಳೆ ರೇಷ್ಮೆ ಕೃಷಿ ಕ್ಷೇತ್ರ ವ್ಯಾಪ್ತಿಯು 57 ಸಾವಿರ ಹೆಕ್ಟೇರ್‌ನಿಂದ 2.63 ಲಕ್ಷ ಹೆಕ್ಟೇರ್‌ಗೆ ವಿಸ್ತಾರಗೊಂಡಿದೆ. ಕಚ್ಚಾ ರೇಷ್ಮೆ ಉತ್ಪಾದನೆಯು ಪ್ರತಿ ಹೆಕ್ಟೇರ್‌ಗೆ 15 ಕೆಜಿಯಿಂದ 110 ಕೆಜಿಗೆ ಹೆಚ್ಚಳವಾಗಿದೆ. ಒಂದು ಕೆಜಿ ರೇಷ್ಮೆ ನೂಲು ತೆಗೆಯಲು 17 ಕೆಜಿ ರೇಷ್ಮೆ ಗೂಡು ಬೇಕಿತ್ತು. ಇದೀಗ 7 ಕೆಜಿ ರೇಷ್ಮೆಗೂಡಿಗೆ ಬಂದು ನಿಂತಿದೆ. 9.5 ಮಿಲಿಯನ್ ಜನರಿಗೆ ಉದ್ಯೋಗ ಅವಕಾಶವನ್ನು ನೀಡಿರುವ ರೇಷ್ಮೆ ಕ್ಷೇತ್ರವು ವರ್ಷಕ್ಕೆ 2028 ಕೋಟಿ ರೂ. ರಫ್ತಿನಿಂದ ಆದಾಯ ಗಳಿಸುತ್ತಿದೆ ಎಂದು ತಿಳಿಸಿದರು.

ರೇಷ್ಮೆ ಉತ್ಪಾದನೆಯಲ್ಲಿ ಚೀನಾ ದೇಶಕ್ಕೆ ಭಾರತ ತಕ್ಕ ಪೈಪೋಟಿ ನೀಡುತ್ತಿದೆ. ಆ ದೇಶದಿಂದ ರೇಷ್ಮೆ ಆಮದಿನ ಪ್ರಮಾಣವನ್ನು ವರ್ಷದಿಂದ ವರ್ಷಕ್ಕೆ ತಗ್ಗಿಸಲಾಗುತ್ತಿದೆ. ದೇಶದಲ್ಲೇ ರೇಷ್ಮೆ ಉತ್ಪಾದನೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಕೃಷಿ ಕ್ಷೇತ್ರವನ್ನು ಇತರ ರಾಜ್ಯಗಳಿಗೂ ವಿಸ್ತರಣೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ.ಪಿ.ಶಿವಕುಮಾರ್, ಸದಸ್ಯ ಕಾರ್ಯದರ್ಶಿ, ಕೇಂದ್ರ ರೇಷ್ಮೆ ಮಂಡಳಿ