ಹುಬ್ಬಳ್ಳಿ: ಭಾರತ ಸ್ವಾತಂತ್ರ್ಯ 100ನೇ ವರ್ಷಾಚರಣೆ ವೇಳೆಗೆ (2047) ಭಾರತದ ಆರ್ಥಿಕ ವ್ಯವಸ್ಥೆ ವಿಶ್ವದಲ್ಲಿಯೇ ನಂ. 1 ಇಲ್ಲವೇ 2ನೇ ಸ್ಥಾನಕ್ಕೆ ಬರಲಿದೆ. ಈ ಕುರಿತು ವಿಶ್ವ ಬ್ಯಾಂಕ್, ದೇಶ-ವಿದೇಶದ ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿ ಹೇಳುತ್ತಿದ್ದಾರೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಭಗವಂತ ಖೂಬಾ ವಿವರಿಸಿದರು.
ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ರೈಲ್ವೆ ಇಲಾಖೆ, ಅಂಚೆ ಇಲಾಖೆ, ಕೆನರಾ ಬ್ಯಾಂಕ್, ವಿವಿಧ ಹಣಕಾಸು ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಹೊಸದಾಗಿ ಸರ್ಕಾರಿ ಉದ್ಯೋಗ ಪಡೆದವರಿಗೆ ನೇಮಕಾತಿ ಪತ್ರಗಳ ವಿತರಣೆಯ ರಾಷ್ಟ್ರ ಮಟ್ಟದ 6ನೇ ರೋಜಗಾರ್ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ. 6.8, ಹಣದುಬ್ಬರ ಪ್ರಮಾಣ ಶೇ. 4.7, ಜಿಡಿಪಿ ವೃದ್ಧಿ ಶೇ. 7.2 ಇದೆ. ಈಗಾಗಲೇ ಭಾರತ ವಿಶ್ವದಲ್ಲೇ ಆರ್ಥಿಕವಾಗಿ 5ನೇ ಸ್ಥಾನದಲ್ಲಿದೆ. 2030ರ ವೇಳೆಗೆ ಮೂರನೇ ಸ್ಥಾನಕ್ಕೆ ಜಿಗಿಯಲಿದೆ. ಭಾರತದ ಆರ್ಥಿಕ ವ್ಯವಸ್ಥೆ ವೃದ್ಧಿಯಾಗುತ್ತಿರುವುದನ್ನು ಕಂಡು ಆರ್ಥಿಕ ತಜ್ಞರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 9 ವರ್ಷಗಳಾಗಿವೆ. 9 ವರ್ಷಗಳ ಆಡಳಿತದಲ್ಲಿ ದೇಶದ ಅಭಿವೃದ್ಧಿ, ಯುವಕರಿಗೆ ಅವಕಾಶ, ಮಹಿಳಾ ಕೇಂದ್ರೀಕೃತ ಕಾರ್ಯಕ್ರಮ, ಬೀದಿ ಬದಿ ವ್ಯಾಪಾರಸ್ಥರು ಸೇರಿ ವಿವಿಧ ವಲಯಗಳ ಜನರಿಗೆ ಸರ್ಕಾರವು ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅವರ ಬದುಕನ್ನು ಸುಗಮಗೊಳಿಸಿವೆ. ಮುದ್ರಾ ಯೋಜನೆಯಡಿ ವ್ಯಾಪಾರಸ್ಥರು ಸಾಲ ಪಡೆದು ಉತ್ತಮ ಜೀವನ ನಡೆಸುತ್ತಿದ್ದಾರೆ. ಸ್ಟಾರ್ಟ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಸೇರಿದಂತೆ ಸಾಕಷ್ಟು ಯೋಜನೆಗಳ ಲಾಭವನ್ನು ಸಾರ್ವಜನಿಕರು ಪಡೆದುಕೊಂಡಿದ್ದಾರೆ. ಕಳೆದ 9 ವರ್ಷಗಳಲ್ಲಿ ಅಸಾಧ್ಯವಾದ ಕಾರ್ಯಗಳನ್ನು ಸಾಧ್ಯ ಮಾಡಲಾಗಿದೆ ಎಂದರು.
ವಿವಿಧ ಹುದ್ದೆಗೆ ನೇಮಕವಾದ 100ಕ್ಕೂ ಹೆಚ್ಚು ಜನರಿಗೆ ನೇಮಕಾತಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ನೇಮಕಾತಿ ಪತ್ರ ಪಡೆದ ಶ್ರುತಿ, ವಿದ್ಯಾಧರ ಅನಿಸಿಕೆ ಹಂಚಿಕೊಂಡರು.
ಶಾಸಕ ಮಹೇಶ ಟೆಂಗಿನಕಾಯಿ, ಕೆನರಾ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ ಚಂದ್ರ, ಪ್ರಧಾನ ವ್ಯವಸ್ಥಾಪಕ ಎಂ. ವಿಜಯಕುಮಾರ, ಗುರುಪ್ರಸಾದ ಸಿಂಗ್, ಇತರರು ಇದ್ದರು.