ಚಿಕ್ಕಬಳ್ಳಾಪುರ:ದೇಶದ ಗರಿಮೆಯ ಗುಣಗಾನ, ಮಹನೀಯರ ಸ್ಮರಣೆ, ರಾಷ್ಟ್ರಭಕ್ತಿ ಸಂದೇಶ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ, ವಿವಿಧ ತಂಡಗಳ ಪಥ ಸಂಚಲನ ಸೇರಿ ವಿವಿಧ ಕಾರ್ಯಕ್ರಮಗಳೊಂದಿಗೆ ಸ್ವಾತಂತ್ರ್ಯ ದಿನವನ್ನು ಶುಕ್ರವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ ವತಿಯಿಂದ ಕೈಗೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಧ್ವಜಾರೋಹಣ ನೆರವೇರಿಸಿದರು. ಪರೇಡ್ ಕಮಾಂಡರ್ ಮಹದೇವ ಅಥಣಿರೊಂದಿಗೆ ತೆರೆದ ವಾಹನದಲ್ಲಿ ತೆರಳಿ ಪಥಸಂಚಲನ ತಂಡಗಳನ್ನು ವೀಕ್ಷಿಸಿದರು. ಬಳಿಕ ಧ್ವಜ ವಂದನೆ ಸ್ವೀಕರಿಸಿದರು.
ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್, ಮಹಿಳಾ ಪೊಲೀಸ್, ಅರಣ್ಯ ಇಲಾಖೆ, ವಿವಿಧ ಶಾಲೆಗಳ ತಂಡಗಳು ಪಥ ಸಂಚಲನ ನಡೆಸಿದವು.
ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ
ವಿವಿಧ ಶಾಲೆಗಳು ದೇಶಭಕ್ತಿ ಗೀತೆಗಳ ನೃತ್ಯ ಪ್ರದರ್ಶನವು ಮೆಚ್ಚುಗೆಗೆ ಪಾತ್ರವಾಯಿತು.
ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರು, ಪ್ರತಿಭಾವಂತ ವಿದ್ಯಾರ್ಥಿಗಳು, ಇಲಾಖೆಯಲ್ಲಿ ವಿಶಿಷ್ಟ ಸಾಧನೆಗಳ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಲ್ಯಾಪ್ ಟ್ಯಾಪ್ ವಿತರಿಸಲಾಯಿತು.
*ಭಾರತದ ಸಾಧನೆ ಮಹತ್ತರ
ಸಂವಿಧಾನದ ಮೇಲಿನ ಜನರ ದೃಢ ವಿಶ್ವಾಸ, ನಂಬಿಕೆಯು ಸಂದಿಗ್ಧ ಸಂದರ್ಭದಲ್ಲೂ ಭಾರತವು ಬಲಾಢ್ಯಗೊಳ್ಳುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಸಂತಸ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ದಿನಾಚರಣೆಯಲ್ಲಿಭಾಷಣ ಮಾಡಿದ ಅವರು, ಹೋರಾಟಗಾರರು ಮತ್ತು ಹೋರಾಟಕ್ಕೆ ಜಿಲ್ಲೆಯ ಕೊಡುಗೆ, ದೇಶದ ಸಾಧನೆ ಮತ್ತು ಸವಾಲುಗಳು ಸೇರಿದಂತೆ ಹಲವು ವಿಚಾರಗಳನ್ನು ಸ್ಮರಿಸಿದರು.
ಭಾರತದ ಇಂದಿನ ಸಾಧನೆಯು ಇಂದು, ನಿನ್ನೆ ನಡೆದ ಜಾದುವಲ್ಲ. ಜಗತ್ತಿನ ರಾಷ್ಟ್ರಗಳು ದೇಶವನ್ನು ಬಾಂಧವ್ಯದಿಂದ ಅಪ್ಪಿಕೊಳ್ಳಲ ಸ್ವಾತಂತ್ರ್ಯ ಬಂದ ದಿನದಿಂದ ಪ್ರಗತಿಪರ ನಡೆ ಕಾರಣ. ಇದಕ್ಕೊಂದು ದೊಡ್ಡ ಇತಿಹಾಸ, ಪರಿಶ್ರಮ ಇದೆ ಎಂದರು.
ವಿವಿಧತೆಯಲ್ಲಿ ಏಕತೆ ಹಾಗೂ ಸಾಮರಸ್ಯ, ಪ್ರಜಾಪ್ರಭುತ್ವ ಹಾಗೂ ಸಂವಿಧಾನವು ಭಾರತದ ಹೆಮ್ಮೆ, ಆದರೆ, ಈಗ ಕೋಮುವಾದ ತಲೆ ಎತ್ತುತ್ತಿರುವ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅದರಲ್ಲೂ ದೇಶದ ಸಮಗ್ರತೆ ಹಾಗೂ ಭದ್ರತೆಯನ್ನು ಕಾಪಾಡುವಲ್ಲಿ ಯುವ ಜನರ ಜವಾಬ್ದಾರಿ ಮಹತ್ತರವಾದುದು ಎಂದರು.