ಜಿಲ್ಲೆ

ನಿತ್ಯೋತ್ಸವ ಕವಿ ನಿಸಾರ್​ ಅಹಮದ್ ನಡೆದು ಬಂದ ಹಾದಿಯ ಮೆಲುಕು

ಬೆಂಗಳೂರು: ನಿತ್ಯೋತ್ಸವ ಕವಿ ಎಂದೇ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಖ್ಯಾತರಾಗಿದ್ದ ಕೆ.ಎಸ್​. ನಿಸಾರ್​ ಅಹಮದ್ ನಿಧನದಿಂದ ಕನ್ನಡ ಸಾಹಿತ್ಯ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ. ಕನ್ನಡ ಸಾಹಿತ್ಯ ಲೋಕದ ಮೇರು ವ್ಯಕ್ತಿಯಾಗಿದ್ದ ನಿಸಾರ್ ಅವರದ್ದು ಧರ್ಮವನ್ನು ಮೀರಿದ ವ್ಯಕ್ತಿತ್ವ. ಎಂದಿಗೂ ವಿವಾದಗಳನ್ನು ಮೈಮೇಲೆ ಎಳೆದುಕೊಂಡವರಲ್ಲ. ಅವರು ಬೆಳೆದು ಬಂದು ಹಾದಿ ಎಲ್ಲರಿಗೂ ಸ್ಪೂರ್ತಿದಾಯಕವಾದದ್ದು.

ಜೀವನದ ದಾರಿ

ಜನನ: 5.02.1936, ಬೆಂ. ಗ್ರಾಮಾಂತರ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಕೊಕ್ಕರೆಹೊಸಳ್ಳಿ

ತಂದೆ-ತಾಯಿ: ಕೆ.ಎಸ್. ಹೈದರ್-ಹಮೀದಾ ಬೇಗಂ

ಓದು: ಬೆಂ.ಗ್ರಾಮಾಂತರ ದೇವನಹಳ್ಳಿ ಹಾಗೂ ಬೆಂಗಳೂರು ಮಾವಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ.

ಹೊಸಕೋಟೆ ಮುನಿಸಿಪಲ್ ಹೈಸ್ಕೂಲ್.

ಬೆಂಗಳೂರು ಸರ್ಕಾರಿ ಇಂಟರ್ ಮೀಡಿಯೇಟ್ ಕಾಲೇಜು.

ಬೆಂಗಳೂರು ಸೆಂಟ್ರಲ್ ಕಾಲೇಜು, ಭೂವಿಜ್ಞಾನದಲ್ಲಿ ಎಂ.ಎಸ್ಸಿ (1959)

ಹುದ್ದೆ: ಮೈಸೂರು ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಸಹಾಯಕ ಭೂವಿಜ್ಞಾನಿ. (ಗುಲ್ಬರ್ಗಾ)

ಉಪನ್ಯಾಸಕ-ಪ್ರಾಧ್ಯಾಪಕ: ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳಲ್ಲಿ 34 ವರ್ಷ ಭೂವಿಜ್ಞಾನದ ಉಪನ್ಯಾಸಕ ಹಾಗೂ ಪ್ರಾಧ್ಯಾಪಕ.

ವಿವಾಹ: 17.04.1966. ಪತ್ನಿ: ಷಹನವಾಜ್ ಬೇಗಂ (ಮುಖ್ಯೋಪಾಧ್ಯಾಯಿನಿಯಾಗಿ ನಿವೃತ್ತಿ)

ಮಕ್ಕಳು: ಇಬ್ಬರು ಪುತ್ರರು, ಇಬ್ಬರು ಪುತ್ರಿಯರು

ಕೃತಿಗಳು:

ಮುಖ್ಯ ಕವನ ಸಂಕಲನ:

‘ಮನಸು ಗಾಂಧಿಬಜಾರು’-1960, ‘ನೆನೆದವರ ಮನದಲ್ಲಿ’-1964, ‘ಸಂಜೆ ಐದರ ಮಳೆ’-1970, ‘ಆಯ್ದ ಕವಿತೆಗಳು’-1974, ‘ನಿತ್ಯೋತ್ಸವ’-1976, ‘ಸ್ವಯಂಸೇವೆಯ ಗಿಳಿಗಳು’-1977, ‘ಸಮಗ್ರ ಕವಿತೆಗಳು’-1991, ‘ಆಕಾಶಕ್ಕೆ ಸರಹದ್ದುಗಳಿಲ್ಲ’-1998, ‘ಸಮಗ್ರ ಭಾವಗೀತೆಗಳು’-2001.

ವಿಮರ್ಶೆ-ವಿಚಾರಸಾಹಿತ್ಯ: ‘ಇದು ಬರಿ ಬೆಡಗಲ್ಲೋ ಅಣ್ಣ’-1980, ‘ಮನದೊಂದಿಗೆ ಮಾತುಕತೆ’-1991, ‘ಹಿರಿಯರು ಹರಸಿದ ಹೆದ್ದಾರಿ’-1992, ‘ಅಚ್ಚುಮೆಚ್ಚು’-1995.

ಅನುವಾದ: ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್, ‘ಒಥೆಲೊ’, ‘ಬರಿ ಮರ್ಯಾದಸ್ಥರೆ’ (ನೆರೂಡ ಕಾವ್ಯ).

ಪ್ರಥಮ ಕ್ಯಾಸೆಟ್: ‘ನಿತ್ಯೋತ್ಸವ’- ಕನ್ನಡದ ಮೊಟ್ಟಮೊದಲ ಸುಗಮ ಸಂಗೀತದ ಧ್ವನಿ ಸುರಳಿ. (1978)

ಸ್ಥಾನಮಾನ

  • 1967 ಮತ್ತು 1985ರಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ನಡೆದ ಅಖಿಲ ಭಾರತ ಆಕಾಶವಾಣಿಯ ಕವಿ ಸಮ್ಮೇಳನದಲ್ಲಿ ಕನ್ನಡದ ಪ್ರತಿನಿಧಿ.
  • 1981 ಮುಂಬೈ ಕರ್ನಾಟಕ ಸಂಘ ನಡೆಸಿದ ಅಂತರ್ ಭಾಷಾ ಕವಿ ಸಮ್ಮೇಳನದ ಅಧ್ಯಕ್ಷತೆ.
  • 1984 ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ.
  • 2006 ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷ.

ಕೃತಿಗಳಿಗೆ ಪ್ರಶಸ್ತಿ

  • 1978 ‘ಹಕ್ಕಿಗಳು’ ಕೃತಿಗೆ ದೆಹಲಿಯ ಎನ್​ಸಿಇಆರ್​ಟಿ ರಾಷ್ಟ್ರೀಯ ಬಹುಮಾನ.
  • 1978 ‘ಹಕ್ಕಿಗಳು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ.
  • 1981 ‘ಹೆಜ್ಜೆ ಗುರುತು’ ಕೃತಿಗೆ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ.
  • 1992 ‘ಹಿರಿಯರು ಹರಸಿದ ಹೆದ್ದಾರಿ’ ವೈಚಾರಿಕ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುರಸ್ಕಾರ.

ಪ್ರಶಸ್ತಿ-ಪುರಸ್ಕಾರ

  • 1981 ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ.
  • 1991 ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ.
  • 1994 ಕರ್ನಾಟಕ ನಾಟಕ ಅಕಾಡಮಿ ಫೆಲೋಷಿಪ್.
  • 2003 ಹಂಪಿ ಕನ್ನಡ ವಿಶ್ವವಿದ್ಯಾಲಯ- ‘ನಾಡೋಜ’ ಪುರಸ್ಕಾರ.
  • 2005 ಧಾರವಾಡ ವಿಶ್ವವಿದ್ಯಾಲಯ- ಗೌರವ ಡಾಕ್ಟರೇಟ್.
  • 2006 ‘ಮಾಸ್ತಿ’ ಪ್ರಶಸ್ತಿ.
  • 2006 ರಾಜ್ಯ ಸರ್ಕಾರ ನೀಡುವ ಡಿ.ದೇವರಾಜ ಅರಸು ಪ್ರಶಸ್ತಿ.
  • 2008 ಪದ್ಮಶ್ರೀ ಪ್ರಶಸ್ತಿ

ಮಹಾಮೌನ

ಭಾಷೆ, ಗಡಿ, ನೆಲ, ಜಲದ ವಿಚಾರ ರಾಜ್ಯದಲ್ಲಿ ಆಗಾಗ್ಗೆ ಭುಗಿಲೆದ್ದಾಗ ಕೆಲವು ಸಾಹಿತಿಗಳು ಬೀದಿಗಿಳಿದು ಹೋರಾಟ ನಡೆಸಿದರೂ ನಿಸಾರ್, ಮಹಾಮೌನ ತಳೆಯುತ್ತಿದ್ದರು. ಹಿಂದೂ- ಮುಸ್ಲಿಂ ಅನ್ಯೋನ್ಯಕ್ಕೆ ಧಕ್ಕೆ ಬಂದು, ಕೋಮು ಗಲಭೆಗಳಾದ ಸಂದರ್ಭದಲ್ಲಂತೂ ಮಾಧ್ಯಮ ದವರಿಂದ ದೂರವೇ ಉಳಿದು ಬಿಡುತ್ತಿದ್ದರು.

ಹಿರಿಯರ ಒಡನಾಟ

ನಿಸಾರ್ ಅವರು ಲಂಕೇಶ್, ಅನಂತಮೂರ್ತಿ, ಭೈರಪ್ಪ ಈ ಪೀಳಿಗೆಯ ಲೇಖಕರಾದರೂ ಹಿಂದಿನ ಪೀಳಿಗೆಯ ಪುತಿನ, ಮಾಸ್ತಿ, ಶಿವರಾಮ ಕಾರಂತ, ವಿ.ಕೃ.ಗೋಕಾಕ್, ಜಿ.ಎಸ್.ಶಿವರುದ್ರಪ್ಪ ಮೊದಲಾದವರೊಡನೆ ಸಂಪರ್ಕ ಇಟ್ಟುಕೊಂಡಿದ್ದರು. ಏಕೆಂದರೆ ನವ್ಯ ಮಾರ್ಗದಲ್ಲಿ ಸಾಹಿತ್ಯ ಬರೆದರೂ ಅವರ ಉದಾರವಾದಿ ಧೋರಣೆಗೆ ಸಮಕಾಲೀನರಿಗಿಂತ ಹಳಬರು ಹೆಚ್ಚು ಒಗ್ಗುತ್ತಿದ್ದರು. ಗೋಕಾಕರು ಬೆಂಗಳೂರಿನಲ್ಲಿ ನೆಲೆಸಿದ್ದಾಗ ‘ಭಾರತ ಸಿಂಧುರಶ್ಮಿ’ ರಚನೆ ಸಾಗಿತ್ತು. ಆಗಾಗ ಅವರು ಅದನ್ನು ತರುಣಮಿತ್ರರ ಎದುರು ಓದಿ ತೋರಿಸುತ್ತಿದ್ದರು. ಈ ಸಹೃದಯ ಕೂಟದಲ್ಲಿ ನಿಸಾರ್ ಕೂಡ ಒಬ್ಬರು.

ನಿಸಾರ್ ಸಾಹಿತ್ಯಕ್ಕೆ ಎಸ್.ಪಿ.ಬಿ ದನಿ

‘ನಿತ್ಯೋತ್ಸವ ಕವಿ’ ನಿಸಾರ್ ಅಹಮದ್ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಕನ್ನಡ ಸಾಹಿತ್ಯಕ್ಕೆ ನಿಸಾರ್ ಕೊಡುಗೆಯನ್ನು ನೆನಪಿಸಿಕೊಂಡಿದ್ದಾರೆ. ಅವರ ಸಾಧನೆ ಬಗ್ಗೆ ಮನತುಂಬಿ ಮಾತನಾಡಿದ್ದಾರೆ. ನಿಸಾರ್ ಅಹಮದ್ ಕನ್ನಡ ಚಿತ್ರರಂಗದ ಹಲವು ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದುದುಂಟು. ಹಾಗೆ ಅವರು ಕೊನೆಯದಾಗಿ ಕಾಣಿಸಿಕೊಂಡ ಸಮಾರಂಭವೆಂದರೆ, ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ನಿರ್ದೇಶನದ ‘ಹಸಿರು ರಿಬ್ಬನ್’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ. ಸುಚಿತ್ರಾ ಫಿಲ್ಮ್ ಸೊಸೈಟಿ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ನಿಸಾರ್ ಮುಖ್ಯ ಅತಿಥಿಯಾಗಿ ಬಂದು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದರು. ವೆಂಕಟೇಶಮೂರ್ತಿ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದರು. 80ರ ದಶಕದಲ್ಲಿ ಬಿಡುಗಡೆಯಾದ ‘ಮರಳಿ ಗೂಡಿಗೆ’ ಚಿತ್ರದಲ್ಲಿ ನಿಸಾರ್ ಬರೆದ ‘ನೀ ನುಡಿಯದಿರಲೇನು ...’ ಎಂಬ ಹಾಡನ್ನು ಬಳಸಿಕೊಳ್ಳಲಾಗಿತ್ತು. ಕೆ.ಆರ್.ಶಾಂತಾರಾಂ ನಿರ್ದೇಶನದ ಈ ಚಿತ್ರದಲ್ಲಿ ಕಲ್ಯಾಣ್ ಕುಮಾರ್, ಜೈಜಗದೀಶ್, ರೂಪಾದೇವಿ, ಶ್ರೀನಿವಾಸಮೂರ್ತಿ ಮುಂತಾದವರು ನಟಿಸಿದ್ದರು. ರಾಜನ್-ನಾಗೇಂದ್ರ ಈ ಪದ್ಯಕ್ಕೆ ಸಂಗೀತ ಸಂಯೋಜಿಸಿದ್ದು, ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಈ ಹಾಡನ್ನು ಹಾಡಿದ್ದಾರೆ.

ಬೆಂಗಳೂರಿನ ಮೇಲೆ ಪ್ರೀತಿ

ಡಿವಿಜಿ, ಮಾಸ್ತಿಯವರಂತೆ ದೀರ್ಘಕಾಲ ಬೆಂಗಳೂರಿನಲ್ಲಿ ನೆಲೆಸಿದವರು ನಿಸಾರ್. ಬೆಂಗಳೂರಿನ ಋತುಮಾನ, ಮಳೆಯ ರಿಂಗಣ ಮತ್ತು ಬೇಸಿಗೆ ಎಲ್ಲವೂ ಅವರ ಪ್ರಜ್ಞೆಯ ಭಾಗವೇ ಆಗಿತ್ತು. ಒಂದೊಂದು ಬಡಾವಣೆಯ ವಿಶೇಷತೆ ಕುರಿತು ಮಾತನಾಡಬಲ್ಲವರಾಗಿದ್ದರು.

ಅವರೊಬ್ಬ ಕನ್ನಡದ ದೊಡ್ಡ ಕವಿ. ಉತ್ತಮ ಅನುವಾದಕರೂ ಹೌದು. ಕನ್ನಡಕ್ಕೆ ಹೊಸ ಸಂವೇದನೆ ಕೊಟ್ಟವರು. ಒಬ್ಬ ವಿಜ್ಞಾನಿಯಾಗಿ ಸಾಹಿತ್ಯದ ಅಭಿರುಚಿ ಹೊಂದಿ ಕನ್ನಡ ಸಾಹಿತ್ಯಕ್ಕೆ ನಿತ್ಯೋತ್ಸವ ಕೊಡುಗೆ ನೀಡಿ ಮರೆಯಾದ ನಿಸಾರ್ ಅಹಮದರ ಆತ್ಮಕ್ಕೆ ಆ ಶ್ರೀಶೈಲ ಮಲ್ಲಿಕಾರ್ಜುನ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ. | ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಶೈಲ ಪೀಠ