ಹುಕ್ಕೇರಿ: ಶ್ರೀ ಗುರುಶಾಂತೇಶ್ವರ ಹಿರೇಮಠದಲ್ಲಿ ಗೋವಿನ ಸಗಣಿಯಿಂದ ನಿರ್ಮಿಸಿದ ಹಣತೆ ಬಳಸಿ ದೀಪೋತ್ಸವ ಆಚರಿಸಿದ್ದು ಶ್ಲಾಘನೀಯ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಂಸದ ರಮೇಶ ಕತ್ತಿ ಹೇಳಿದ್ದಾರೆ.
ಸ್ಥಳೀಯ ಹಿರೇಮಠದಲ್ಲಿ ಸೋಮವಾರ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಣ್ಣಿನ ಅಥವಾ ಪಿಂಗಾಣಿ ಹಣತೆ ಬಳಸುವುದು ಸಾಮಾನ್ಯ ಸಂಗತಿ. ಆದರೆ, ಗೋವು ಜನ್ಯ ಪದಾರ್ಥಗಳ ಬಳಕೆ ವೈಜ್ಞಾನಿಕವಾಗಿ ಸರ್ವಶ್ರೇಷ್ಠ. ಓಜೋನ್ ಪದರಿನ ರಕ್ಷಣೆಗೆ ಬೆರಣಿಯ ಹೊಗೆ ಅತ್ಯುತ್ತಮ ಎನ್ನುವುದು ವಿಜ್ಞಾನಿಗಳ ಅನಿಸಿಕೆಯಾಗಿದೆ. ಅದಕ್ಕಾಗಿ ಅನಾದಿ ಕಾಲದಿಂದ ಹೋಮ-ಹವನಗಳಲ್ಲಿ ಗೋವು ಜನ್ಯ ಪದಾರ್ಥಗಳನ್ನು ಗುರು ಹಿರಿಯರು ಬಳಸುತ್ತ ಬಂದಿದ್ದಾರೆ. ನಮ್ಮ ದೇಶದ ಸಂಸ್ಕೃತಿ ಶ್ರೇಷ್ಠ ಎಂದು ತಿಳಿಸಿದರು. ಅದಕ್ಕೂ ಮುನ್ನ ಗೋಪೂಜೆ ನೆರವೇರಿತು. ಡಿಸಿಸಿ ಬ್ಯಾಂಕ್‌ಗೆ ಮರಳಿ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ ಕತ್ತಿ ಅವರನ್ನು ಸನ್ಮಾನಿಸಲಾಯಿತು. ನಂತರ ಶ್ರೀ ಗುರುಶಾಂತೇಶ್ವರ ಪಲ್ಲಕ್ಕಿ ಉತ್ಸವ ಜರುಗಿತು. ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ಉಪಾಧ್ಯಕ್ಷ ಆನಂದ ಗಂಧ, ಸದಸ್ಯರಾದ ಸದಾಶಿವ ಕರೆಪ್ಪಗೋಳ, ಭೀಮಶಿ ಗೋರಖನಾಥ, ಮುಖಂಡರಾದ ಪರಗೌಡ ಪಾಟೀಲ, ಪ್ರಜ್ವಲ ನಿಲಜಗಿ, ಪಿಂಟು ಶೆಟ್ಟಿ, ಸುಹಾಸ ನೂಲಿ, ಅಫುಸ್ ತುಬಚಿ, ಚೆನ್ನಪ್ಪ ಗಜಬರ, ಬಸವರಾಜ ಗಂಗಣ್ಣವರ, ಪುಟ್ಟು ಖಾಡೆ ಇತರರು ಇದ್ದರು.
ಗೋವಿನ ಮಹತ್ವ ಅರಿತ ಸರ್ಕಾರ ಗೋಹತ್ಯೆ ನಿಷೇಧಿಸಿದ್ದು ಸ್ವಾಗತಾರ್ಹ.ಕರೊನಾ ರೋಗ ನಿಯಂತ್ರಣಕ್ಕೆ ನಿದರ್ಶನವೆಂದರೆ ವಿಆರ್‌ಎಲ್ ಸಮೂಹ ಕೇಂದ್ರ ಹೊಂದಿರುವ ಹುಬ್ಬಳ್ಳಿಯ ವರೂರಿನಲ್ಲಿ ಹಲವಾರು ವರ್ಷಗಳಿಂದ ಅಗ್ನಿಹೋತ್ರ ಕಾರ್ಯವನ್ನು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರು ನೆರವೇರಿಸುತ್ತಿರುವುದು ಶ್ಲಾಘನೀಯ.| ಚಂದ್ರಶೇಖರ ಶಿವಾಚಾರ್ಯರು ಹಿರೇಮಠ, ಹುಕ್ಕೇರಿ
ಗೋಹತ್ಯೆ ನಿಷೇಧಕ್ಕಿಂತ ಮುನ್ನ ಗೋಮಾಂಸ ರಪ್ತು ನಿಷೇಧ ಮಾಡಬೇಕು. ಆಗ ಮಾತ್ರ ಗೋ ಹತ್ಯೆ ನಿಯಂತ್ರಣ ಸಾಧ್ಯ.| ರಮೇಶ ಕತ್ತಿ ಅಧ್ಯಕ್ಷರು, ಬಿಡಿಸಿಸಿ ಬ್ಯಾಂಕ್ ಬೆಳಗಾವಿ