ಚಿಕ್ಕಬಳ್ಳಾಪುರ: ಪ್ರತಿದಿನ ಆಗಮಿಕ ಪಂಡಿತರಿಂದ ಯಜ್ಞ, ಚಿಂತಕರ ಉಪನ್ಯಾಸ, ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಚಟುವಟಿಕೆಯೊಂದಿಗೆ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ದಸರಾ ಮಹೋತ್ಸವಕ್ಕೆ ಶನಿವಾರ ತೆರೆ ಬಿದ್ದಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್, ದಿವ್ಯ ಆಚರಣೆಗಳಿಂದ ದಿವ್ಯತೆಯ ಸವಿಯನ್ನು ಅನುಭವಿಸಲು ಸಾಧ್ಯವಾಗುತ್ತದೆ. ಅನೇಕರು ದೈವ ಸಾಕ್ಷಾತ್ಕಾರಕ್ಕಾಗಿ ಹಂಬಲಿಸುತ್ತಾರೆ. ಆದರೆ, ಸಾವಾನ್ಯರಲ್ಲಿ ಸಾವಾನ್ಯರಾದ ನಮಗೆ ಅಷ್ಟು ಸುಲಭವಾಗಿ ದಿವ್ಯತೆಯ ಅರಿವಾಗುವುದಿಲ್ಲ. ದೈವಿಕ ಸತ್ಕಾರ್ಯಗಳ ನಿರಂತರ ಪರಿಶ್ರಮ ಅಗತ್ಯ ಎಂದರು.
ಶತವಾನಗಳಿಂದ ಅನೇಕ ಹೊಡೆತಗಳನ್ನು ತಿಂದರೂ ಅಚಲವಾಗಿರುವ ಸುಂದರ ಸಂಸ್ಕೃತಿ ಭಾರತದ್ದು. ಇದನ್ನು ರಕ್ಷಿಸಿ, ಬೆಳೆಸಿ ಪಸರಿಸುವ ಹೊಣೆಗಾರಿಕೆ ಭಾರತೀಯರಾದ ನಮ್ಮೆಲ್ಲರದು. ಒಳ್ಳೆಯ ಆಚರಣೆಗಳಿಂದ ಸಂಸ್ಕೃತಿಯು ಮುಂದಿನ ಜನಾಂಗಕ್ಕೆ ಬಳುವಳಿಯಾಗಿ ತಲುಪುತ್ತದೆ. ಸದಾಚಾರದಿಂದ ಕೂಡಿದ ಆಚರಣೆಗಳಿಂದ ಸುತ್ತಲಿನ ಋಣಾತ್ಮಕ ಪ್ರೇರಣೆಗಳು ದೂರವಾಗುತ್ತವೆ ಎಂದರು. ಕುಲಾಧಿಪತಿ ಬಿ.ಎನ್. ನರಸಿಂಹಮೂರ್ತಿ ಮತ್ತಿತರರು ಇದ್ದರು.
ಆಧ್ಯಾತ್ಮಿಕ ಕಲಾ ಸೇವೆ
ಒಂಬತ್ತು ದಿನಗಳ ಕಾರ್ಯಕ್ರಮದಲ್ಲಿ ಅನುರಾಧಾ ವಿಕ್ರಾಂತ ತಂಡದಿಂದ ನೃತ್ಯ, ಸತ್ಯಸಾಯಿ ವಿದ್ಯಾರ್ಥಿ ಸಂಸ್ಥೆಯ ವಿದ್ಯಾರ್ಥಿಗಳಿಂದ ದೇವಿಮಂಗಳಂ, ಭಾವಾಂಜಲಿ, ತನುಶ್ರೀ ತಂಡ, ಕೆ.ಆರ್.ಮಾನಸ್ವಿನಿ ನೇತೃತ್ವದ ಮಾತೆ ನೃತ್ಯ ರೂಪಕ ಪ್ರದರ್ಶನ, ಸಿದ್ಧಾರ್ಥ ಬೆಳ್ಮಣ್ಣು, ಪಂಡಿತ್ ವೆಂಕಟೇಶ್ ಕುಮಾರ್ ಅವರ ಹಿಂದುಸ್ತಾನಿ ಗಾಯನ, ವಿದುಷಿ ರಂಜನಿ ಮತ್ತು ಗಾಯಿತ್ರಿ ತಂಡ, ಅರುಣಸಾಯಿರಾಮ್ ಅವರ ಕರ್ನಾಟಕ ಸಂಗೀತ, ತಾಲ್ ್ರೆ ಕಾರ್ಯಕ್ರಮವು ಆಕರ್ಷಕವಾಗಿ ಮೂಡಿ ಬಂತು.ಕರೊನಾ ಸಂಕಷ್ಟಕ್ಕೆ ಸಿಲುಕಿದ್ದ ಮಕ್ಕಳ ಶಿಕ್ಷಣಕ್ಕಾಗಿ ಸತ್ಯಸಾಯಿ ಸಂಸ್ಥೆಯೊಂದಿಗೆ ಶ್ರಮಿಸುತ್ತಿರುವ ಆರ್‌ಎಸ್‌ಎಸ್ ಸ್ವಯಂ ಸೇವಕರನ್ನೊಳಗೊಂಡಂತೆ ವಿದ್ಯಾನಿಧಿ ಸಮಾವೇಶ, ನವದುರ್ಗೆಯರ ಅವತಾರದ ಉಪನ್ಯಾಸ, ಕೃಷಿಕರ ಸಂವಾದ ಮತ್ತು ಕೃಷಿ ಆವಿಷ್ಕಾರ ಮತ್ತು ಸಂರಕ್ಷಣಾ ಪುರಸ್ಕಾರ ಕಾರ್ಯಕ್ರಮಗಳು ಗಮನ ಸೆಳೆದವು.
ವಿವಿಧ ಕಾರ್ಯಕ್ರಮ, ಹಲವಾರು ಗಣ್ಯರು
ಪ್ರತಿವರ್ಷದಂತೆ ಲೋಕ ಕಲ್ಯಾಣಕ್ಕೆ ಪ್ರಾರ್ಥಿಸಿ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಳಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿಯ ಆರಾಧನೆ, ಜತೆಗೆ ಗಣಪತಿ, ನವಗ್ರಹ, ಶನಿಶಾಂತಿ, ಪವಮಾನ ಮತ್ತು ಆಶ್ಲೇಷ ಬಲಿ, ಧನ್ವಂತರಿ, ವಿಷ್ಣು ಸಹಸ್ರನಾಮ, ಮಹಾರುದ್ರ ಯಾಗ ಸೇರಿ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಅಲ್ಲದೆ ಪ್ರತಿದಿನ ಸಂಗೀತ, ನೃತ್ಯ ಪ್ರದರ್ಶನಗಳೂ ನಡೆದವು.ಮಹೋತ್ಸವದ ಅಂಗವಾಗಿ ಪಶ್ಚಿಮ ಬಂಗಾಳದ ಉತ್ತರ ಕೋಲ್ಕತದ ಕುಮರ್ತುಲಿ ನದಿಯ ಆವೆಮಣ್ಣಿನಿಂದ ತಯಾರಿಸಿದ್ದ ದುರ್ಗಾ ಮಾತೆಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು. ಒಂಬತ್ತು ದಿನಗಳ ಕಾರ್ಯಕ್ರಮದಲ್ಲಿ ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯ್ ಶಂಕರ್, ಸಚಿವರಾದ ಕೆ.ಎಚ್.ಮುನಿಯಪ್ಪ, ಚೆಲುವರಾಯಸ್ವಾಮಿ, ಡಾ ಎಂ.ಸಿ.ಸುಧಾಕರ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಡಾ.ಸಿ.ಎನ್. ಅಶ್ವತ್ಥನಾರಾಯಣ ಸೇರಿ ಗಣ್ಯರ ದಂಡೇ ಆಗಮಿಸಿತ್ತು. ಇನ್ನೂ ದೇಶ ವಿದೇಶಗಳ ಗಣ್ಯರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.