ಜಿಲ್ಲೆ

ಮಂಗಳೂರು ಮೆರುಗಿಗೆ ಭಾರತೀಯ ಸೇನೆಯ ಟಿ-55 ಯುದ್ಧ ಟ್ಯಾಂಕ್ ಸೇರ್ಪಡೆ

ಮಂಗಳೂರು: ನಗರಕ್ಕೆ ವಿಶೇಷ ಆಕರ್ಷಣೆಯಾಗಿ ಭಾರತ-ಪಾಕಿಸ್ಥಾನ ವಿರುದ್ಧ 1965ಮತ್ತು 1971ರಲ್ಲಿ ಸೇನಾ ಕಾರ್ಯಾಚರಣೆಯಲ್ಲಿ ಬಳಕೆಯಾಗಿದ್ದ ಭಾರತೀಯ ಭೂಸೇನೆಯ ಯುದ್ಧ ಟ್ಯಾಂಕರ್ ಟಿ-55 ಹಾಗೂ 303 ರೈಫಲ್ ಆಗಮಿಸಿದೆ.

ವೀರ ಯೋಧರನ್ನು ಸ್ಮರಿಸುವ ಮತ್ತು ಸೇನೆಗೆ ಸೇರುವ ಯುವಕರಿಗೆ ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಯುದ್ಧ ಟ್ಯಾಂಕರನ್ನು ಮಂಗಳೂರು ನಗರ ಮಧ್ಯದಲ್ಲಿ ಇರಿಸಬೇಕೆಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಟ್ಯಾಂಕರನ್ನು ಉಚಿತವಾಗಿ ನೀಡಲು ಮನವಿ ಮಾಡಿದ್ದರು.

ಭಾರತೀಯ ಸೇನೆಯಲ್ಲಿ 1961ರಿಂದ 2001ರ ವರೆಗೆ ಸೇವೆಯಲ್ಲಿದ್ದ ಈ ಯುದ್ಧ ಟ್ಯಾಂಕರನ್ನು ಪುಣೆಯ ಕಿರ್ಕಿಯಲ್ಲಿರುವ ಭಾರತೀಯ ಸೇನೆಯ ಡಿಪೋದಲ್ಲಿ ಇರಿಸಲಾಗಿತ್ತು. ಬರೋಬ್ಬರಿ 40 ಟನ್ ತೂಕವಿರುವ ಟಿ-55 ಯುದ್ಧ ಟ್ಯಾಂಕರ್ ವಿಶೇಷ ಟ್ರೈಲರ್‌ನಲ್ಲಿ ಶುಕ್ರವಾರ ಪುಣೆಯಿಂದ ಹೊರಟಿದ್ದು ಮೂರು ದಿನದ ಪ್ರಯಾಣದ ಬಳಿಕ ಸೋಮವಾರ ರಾತ್ರಿ ಮಂಗಳೂರು ತಲುಪಿದೆ. ಸದ್ಯಕ್ಕೆ ನಗರದ ಕದ್ರಿ ಸರ್ಕಿಟ್ ಹೌಸ್ ಬಳಿಯಲ್ಲಿ ಇರಿಸಲಾಗಿದೆ.

ಸಾಮಾನ್ಯವಾಗಿ ಯುದ್ಧದಲ್ಲಿ ಪಾಲ್ಗೊಂಡು ಸೇವೆಯಿಂದ ನಿವೃತ್ತಿಯಾಗಿರುವ ಟ್ಯಾಂಕ್ ಮತ್ತಿತರ ಸೇನೆಯ ಆಯುಧಗಳನ್ನು ಯುದ್ಧ ಸ್ಮರಣಿಕೆ ರೀತಿಯಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ. ಕದ್ರಿ ಯುದ್ಧ ಸ್ಮಾರಕದ ಬಳಿಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸೂಕ್ತ ವೇದಿಕೆಯನ್ನು ನಿರ್ಮಿಸಿ ಯುದ್ಧ ಟ್ಯಾಂಕರ್ ಇರಿಸಬೇಕೆಂಬ ಯೋಜನೆ ಇದೆಯೆಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ.